ಮ್ಯೂಸಿಕ್ ತಂತ್ರಜ್ಞಾನ...

ತಂತ್ರಜ್ಞಾನ ಸುಧಾರಿಸಿದ ಹಾಗೆಲ್ಲ ನಾವೂ ಸುಧಾರಿಸಿದ್ದೇವೆ ಎಂದು ನಾವಂದುಕೊಳ್ಳುತ್ತೇವೆ. ಕೆಲವು ವಿಷಯದಲ್ಲಿ ಇದು ಹೌದಾದರೂ, ಆಡಿಯೋ ಟೆಕ್ನಾಲಜಿ ವಿಷಯದಲ್ಲಿ ಇದು ಸುಳ್ಳು!

ಕಂಪ್ಯೂಟರು, ಮೊಬೈಲ್‌ನಲ್ಲಿ ನಾವು ಮ್ಯೂಸಿಕ್ ಕೇಳಲು ಶುರು ಮಾಡಿದ ಮೇಲೆ ಕರ್ಕಶ ಧ್ವನಿಯನ್ನೇ ನಾವು ಕೇಳುತ್ತಿದ್ದೇವೆ! ಸಿಡಿಯಲ್ಲಿ ನಾವು ಕೇಳುತ್ತಿದ್ದ ಸ್ಪಷ್ಟ ಧ್ವನಿ ಬಹುಶಃ ನಾವು ಕಂಪ್ಯೂಟರ್‌, ಮೊಬೈಲ್‌ನಲ್ಲಿ ಸಂಗೀತ ಕೇಳಲು ಶುರು ಮಾಡಿದ ಮೇಲೆ ಕೇಳಿರಲಿಕ್ಕಿಲ್ಲ. ಅದರಲ್ಲೂ, ಮೊದ ಮೊದಲು ಕಂಪ್ಯೂಟರ್‌ನಲ್ಲಿ ಪ್ಲೇ ಆಗುತ್ತಿದ್ದದ್ದು ಹೆಚ್ಚೆಂದರೆ 128 ಕೆಬಿಪಿಎಸ್‌ ಹಾಡುಗಳು. ಅದರಲ್ಲಿ ಕಡಿಮೆ ಫ್ರೀಕ್ವೆನ್ಸಿಯೆಲ್ಲ ಕೆತ್ತಿ ಹೋಗುತ್ತಿತ್ತು. ಹೆಚ್ಚಿನ ಫ್ರೀಕ್ವೆನ್ಸಿ ಧ್ವನಿ ಮಾತ್ರ ಕೇಳಿಸುತ್ತಿತ್ತು. ಆದರೆ, ಸಿಡಿ ಪ್ಲೇ ಮಾಡುತ್ತಿದ್ದಾಗ ಹಾಗಿರಲಿಲ್ಲ. ಸಣ್ಣ ಸಣ್ಣ ಧ್ವನಿಯೂ ಸರಿಯಾಗಿ ಕೇಳಿಸುತ್ತಿತ್ತು.




ಯಾಕೆಂದರೆ, ಸಿಡಿಯಲ್ಲಿ 1411 ಕೆಬಿಪಿಎಸ್‌ ಇರುತ್ತಿತ್ತು. ಅದರಲ್ಲಿ ಸಣ್ಣ ಸಣ್ಣ ಸಂಗತಿಗಳೂ ಅದೆಷ್ಟು ನಿಖರವಾಗಿರುತ್ತಿತ್ತು. ವಿಶೇಷ ಅಂದರೆ, ಡಿಜಿಟಲ್‌ ವ್ಯವಸ್ಥೆ ಬಂದ ಮೇಲೆ 320 ಕೆಬಿಪಿಎಸ್‌ನಲ್ಲೇ ಸಂಗೀತ ಕೇಳಿ ತೃಪ್ತಿ ಪಟ್ಟುಕೊಳ್ಳುತ್ತಿದ್ದೇವೆ. ಕೆಲವು ಬಾರಿ ಅಷ್ಟೂ ಇಲ್ಲ. ನಮ್ಮ ಮ್ಯೂಸಿಕ್ ಸ್ಟ್ರೀಮಿಂಗ್ ಆಪ್‌ಗಳೆಲ್ಲ ಫ್ರೀ ಆವೃತ್ತಿಯಲ್ಲಿ 128 ಕೆಬಿಪಿಎಸ್‌ನಲ್ಲೇ ನಮಗೆ ಸಂಗೀತ ಕೇಳಿಸುತ್ತಿವೆ.

ಈ ಕೆಬಿಪಿಎಸ್ ಅಂದರೆ, ಒಂದು ಸೆಕೆಂಡಿಗೆ ಇಷ್ಟು ಕಿಲೋಬೈಟ್ ಅನ್ನು ಸಾಗಿಸುವುದು ಎಂದರ್ಥ. ಅಂದರೆ, ಉಳಿದ ಸಣ್ಣ ಸಣ್ಣ ಧ್ವನಿಗಳನ್ನೆಲ್ಲ ಕತ್ತರಿಸಿ ಹಾಕಿ ಮುಖ್ಯವಾದ ಧ್ವನಿಯನ್ನು ಮಾತ್ರ ಕೇಳಿಸುತ್ತವೆ. 320 ಕೆಬಿಪಿಎಸ್‌ನಲ್ಲಿ ಈ ಕತ್ತರಿ ಪ್ರಯೋಗ ಸ್ವಲ್ಪ ಕಡಿಮೆ ಆಗುತ್ತದೆ. ಇನ್ನು 1411 ಕೆಬಿಪಿಎಸ್‌ನಲ್ಲಿ ಈ ಯಾವ ನಷ್ಟವೂ ಇರುವುದಿಲ್ಲ. ಧ್ವನಿಯ ಸಣ್ಣ ಸಂಗತಿಗಳೂ ಹಾಗಿದ್ದ ಹಾಗೆಯೇ ಕೇಳಿಸುತ್ತವೆ!

ಆದರೆ, ಈ ಕತ್ತರಿ ಪ್ರಯೋಗ ಶುರುವಾದದ್ದು ಸುಲಭವಾಗಿ ಮ್ಯೂಸಿಕ್ ಫೈಲ್‌ಗಳನ್ನು ಹಂಚಿಕೊಳ್ಳಲು ಅನುವಾಗಲಿ ಎಂಬ ಕಾರಣಕ್ಕೆ! 128 ಕೆಬಿಪಿಎಸ್‌ನ ಒಂದು ನಿಮಿಷದ ಸಂಗೀತದ ಫೈಲ್‌ 1 ಎಂಬಿ ಇದ್ದರೆ, 320 ಕೆಬಿಪಿಎಸ್‌ನ 1 ನಿಮಿಷದ ಫೈಲ್‌ 3.5 ಎಂಬಿ ಇರುತ್ತದೆ. ಅದೇ 1411 ಕೆಬಿಪಿಎಸ್‌ನ 1 ನಿಮಿಷದ ಫೈಲ್ ಸುಮಾರು 10-15 ಎಂಬಿ ಇರುತ್ತದೆ. ಎಂಪಿ3 ಯಲ್ಲಿ ಗರಿಷ್ಠ 320 ಕೆಬಿಪಿಎಸ್‌ನಲ್ಲಿ ಹಾಡುಗಳನ್ನು ಕೇಳಬಹುದು. ಇನ್ನು ಫ್ಲಾಕ್‌ (FLAC) ಮತ್ತು ವೇವ್‌ (WAV) ನಲ್ಲಿ ಫಾರ್ಮ್ಯಾಟ್‌ನಲ್ಲಿ 1411 ಕೆಬಿಪಿಎಸ್‌ ಇರುತ್ತದೆ. ಈಗೀಗ ಫ್ಲಾಕ್ ಫಾರ್ಮ್ಯಾಟ್‌ ಹೆಚ್ಚು ಜನಪ್ರಿಯ ಆಗ್ತಿದೆ. 

ಡಿಜಿಟಲ್ ಸ್ಟ್ರೀಮಿಂಗ್‌ ಆ್ಯಪ್‌ಗಳು ಯಾವುದೇ ಬಫರ್ ಇಲ್ಲದೇ ಹಾಡುಗಳನ್ನು ಕೇಳಿಸಬೇಕು ಎಂಬ ಹುಕಿಗೆ ಬಿದ್ದು, 128, 68 ಕೆಬಿಪಿಎಸ್‌ನಲ್ಲೆಲ್ಲ ಹಾಡುಗಳನ್ನು ಪ್ರಸಾರ ಮಾಡುತ್ತವೆ. ಕೆಲವು ಹಾಡುಗಳಂತೂ 68 ಕೆಬಿಪಿಎಸ್‌ನಲ್ಲಿ ಕೇಳಿದಾಗ ಗೊಳಗೊಳ ಅಂತಿರುತ್ತವೆ. 128 ಕೆಬಿಪಿಎಸ್‌ನಲ್ಲಿ ಹಾಡು ಕೇಳುತ್ತಿದ್ದವರಿಗೆ ಫ್ಲಾಕ್‌ ಫಾರ್ಮ್ಯಾಟ್‌ನಲ್ಲಿರುವ ಹಾಡು ಕೇಳಿಸಿದರೆ ಅದರ ಅನುಭವವೇ ಅದ್ಭುತ! ಈ ಹುಚ್ಚಿಗೆ ಬಿದ್ದು ಇಂದು ಒಂದಷ್ಟು ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಂಡು ಕೇಳಿದೆ. ಎಂಥಾ ಡೀಟೇಲಿಂಗ್! ಸಣ್ಣ ಸಣ್ಣ ಧ್ವನಿಗಳೂ ಅದರಲ್ಲಿ ಅಷ್ಟು ಸ್ಪಷ್ಟ.

ಇನ್ನು, 5ಜಿ ಬಂದ ಮೇಲೆ ಕಡಿಮೆ ಡೇಟಾದಲ್ಲಿ ಹೆಚ್ಚು ಹೆಚ್ಚು ಮ್ಯೂಸಿಕ್ ಕೇಳಿಸಬೇಕು ಎಂಬ ಮನಸ್ಥಿತಿ ಕಡಿಮೆಯಾಗಿ, ಸ್ಪಾಟಿಫೈ, ಅಮೆಜಾನ್ ಮ್ಯೂಸಿಕ್‌ನಂತಹ ಆ್ಯಪ್‌ಗಳು ಫ್ಲಾಕ್ ಫಾರ್ಮ್ಯಾಟ್‌ನಲ್ಲೂ ಹಾಡುಗಳನ್ನು ನಮಗೆ ಕೇಳಿಸಬಹುದು. ಅಲ್ಲಿಯವರೆಗೆ, ಬೇರೆ ಮೂಲವೇ ಗತಿ!

||ಧರ್ಮೋ ರಕ್ಷತಿ ರಕ್ಷಿತಃ|| 🕉🚩