ಅಕ್ಟೋಬರ್ 2 ಅಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಗಾಂಧಿ ಜಯಂತಿ.. ಆದ್ರೆ ಆ ದಿನ ಗಾಂಧಿ ಜಯಂತಿ ಅಷ್ಟೇ ಅಲ್ಲ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮದಿನವೂ ಹೌದು.
ಕುಳ್ಳಗಿನ ದೇಹ, ಶಾಂತ ಮುಖಭಾವ, ಮಗುವಿನಂತಹ ನಗು, ಸರಳ, ಸಜ್ಜನಿಕೆಯ ವ್ಯಕ್ತಿತ್ವ. ಹೌದು! ಅವರೇ ದೇಶದ ಹೆಮ್ಮೆಯ ಮಾಜಿ ಪ್ರಧಾನಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ.
ಕೆಲವು ವ್ಯಕ್ತಿಗಳು ಬಾಳಿ ಬದುಕುವ ರೀತಿಯೇ ಭಿನ್ನವಾಗಿರುತ್ತದೆ. ಕೇವಲ ಅವರ ಒಂದು ಸ್ಮರಣೆಯಷ್ಟೇ ನಮ್ಮಲ್ಲಿ ಹೊಸ ಹುಮ್ಮಸ್ಸು, ಚೈತನ್ಯ ಮತ್ತು ಲವಲವಿಕೆಯನ್ನು ಮೂಡಿಸುತ್ತದೆ. ಅವರ ಧೀಮಂತ ವ್ಯಕ್ತಿತ್ವ ನಮ್ಮಲ್ಲಿರುವ ಆತ್ಮಶಕ್ತಿಯನ್ನು ಬಡಿದೆಬ್ಬಿಸುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಷ್ಟೇ ಅಲ್ಲ, ಶತಶತಮಾನಗಳ ಕಾಲ ಜನರಲ್ಲಿ ಸ್ಪೂರ್ತಿಯ ಸೆಲೆಯನ್ನು ಉಕ್ಕಿಸುತ್ತಲೇ ಇರುತ್ತಾರೆ. ಅಂತಹ ಧೀಮಂತ ವ್ಯಕ್ತಿಗಳಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಒಬ್ಬರು.
ಶಾಸ್ತ್ರೀಜಿಯವರು ಏಕಾಏಕಿ ಪ್ರಧಾನಿ ಹುದ್ದೆಗೆ ಏರಿದವರಲ್ಲ. ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಹಂತ ಹಂತವಾಗಿ ಬೆಳೆದು ಬಂದವರು. ನೆಹರೂರವರು ಪ್ರಧಾನ ಮಂತ್ರಿಗಳಾಗಿದ್ದಾಗ ಶಾಸ್ತ್ರೀಜಿಯವರು ಉತ್ತರ ಪ್ರದೇಶದ ಕಾಂಗ್ರೆಸ್‌ನ ಸಂಸದೀಯ ಕಾರ್ಯದರ್ಶಿಗಳಾಗಿದ್ದರು. ನಂತರ ಉತ್ತರ ಪ್ರದೇಶದ ಸಾರಿಗೆ ಸಚಿವರಾದರು. 1951ರಲ್ಲಿ ಅಖಿಲ ಭಾರತ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆದರೆ ಶಾಸ್ತ್ರೀಜಿ ರೈಲ್ವೆ ಮಂತ್ರಿಗಳಾಗಿ, ಗೃಹ ಮಂತ್ರಿಗಳಾಗಿ ನಂತರ ಪ್ರಧಾಮಂತ್ರಿಗಳಾಗಿ ದೇಶವನ್ನು ಮುನ್ನಡೆಸಿದ ಪರಿ ನಿಜಕ್ಕೂ ಅದ್ಭುತ. ಕೇಂದ್ರ ಸಚಿವರಾದಾಗಲೂ ಮತ್ತು ಪ್ರಧಾನಮಂತ್ರಿಯಾದಾಗಲೂ ಶಾಸ್ತ್ರೀಜಿಯವರು ಬಡವರಾಗಿಯೇ ಉಳಿದಿದ್ದರು. ಕೇಂದ್ರದಲ್ಲಿ ಗೃಹ ಸಚಿವರಾಗಿದ್ದರೂ ಶಾಸ್ತ್ರೀಜಿಯವರಿಗೆ ತಮ್ಮದು ಎಂಬ ಒಂದು ಸ್ವಂತ ಮನೆಯಿರಲಿಲ್ಲ. ಹಾಗಾಗಿ ಎಲ್ಲರೂ ಅವರನ್ನು ‘ಹೋಮ್‌ಲೆಸ್ ಹೋಮ್ ಮಿನಿಸ್ಟರ್’ ಎಂದೇ ಕರೆಯುತ್ತಿದ್ದರು.
ಶಾಸ್ತ್ರೀಜಿಯವರು ಪ್ರಧಾನಮಂತ್ರಿಯಾದ ಸಂದರ್ಭದಲ್ಲಿ ಪರಿಸ್ಥಿತಿ ತೀರಾ ಸಂಕೀರ್ಣವಾಗಿತ್ತು. ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಒಂದೆಡೆ ದೇಶದಲ್ಲಿ ಆಹಾರ ಸಮಸ್ಯೆ. ಮತ್ತೊಂದೆಡೆ ಗಡಿಯಲ್ಲಿ ಪಾಕಿಸ್ತಾನ ಆಗಾಗ ಕ್ಯಾತೆ ತೆಗೆಯುತ್ತಿತ್ತು. ಆ ಸಮಯದಲ್ಲಿ ಪಾಕಿಸ್ತಾನ ಮಾತ್ರ ಭಾರತದ ಮೇಲೆ ಯುದ್ಧ ಮಾಡಿಯೇ ತೀರಬೇಕೆಂಬ ನಿರ್ಧಾರಕ್ಕೆ ಬಂದಿತ್ತು. ಅದಕ್ಕೆ ಕಾರಣ ಸ್ಪಷ್ಟವಾಗಿತ್ತು. ಚೀನಾ ಯುದ್ಧದಿಂದ ಭಾರತೀಯ ಸೈನಿಕರ ಮನಸ್ಥೈರ್ಯ ಕುಗ್ಗಿತ್ತು. ದೇಶದಲ್ಲಿ ರಾಜಕೀಯ ವಿಪ್ಲವವಿತ್ತು.
ಅದು ಆಗಸ್ಟ್ 31, 1965. ಅಂದು ರಾತ್ರಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ಊಟಕ್ಕೆ ಕುಳಿತಿದ್ದರು. ಭಾರತೀಯ ಸೈನ್ಯದ ಮೂರು ಪಡೆಯ ಮುಖ್ಯಸ್ತರು ಪ್ರಧಾನಿ ನಿವಾಸಕ್ಕೆ ದೌಡಾಯಿಸಿದರು. ಸಭೆ ಪ್ರಾರಂಭವಾಯಿತು. ಆಶ್ಚರ್ಯವೆಂಬಂತೆ ಕೇವಲ ಏಳೇ ನಿಮಿಷದಲ್ಲಿ ಪ್ರಧಾನಿಗಳು ಸಭೆ ಮುಗಿಸಿ ಹೊರಬಂದರು. ವಾಸ್ತವದಲ್ಲಿ ಸೇನಾಪಡೆಯ ಮುಖ್ಯಸ್ಥರು ಪಾಕಿಸ್ತಾನಿ ಸೈನ್ಯ ಛಾಂಬ್ ಸೆಕ್ಟರ್‍ನಲ್ಲಿ ಅಂತರಾಷ್ಟ್ರೀಯ ಗಡಿಯನ್ನು ದಾಟಿ ಬರುತ್ತಿದೆ. ಈಗ ನಾವು ಅವರನ್ನು ತಡೆಯದಿದ್ದರೆ ಜಮ್ಮು-ಕಾಶ್ಮೀರ ಭಾರತದಿಂದ ಬೇರ್ಪಡುವ ಎಲ್ಲ ಸಾಧ್ಯತೆಗಳೂ ಇವೆ. ಈಗೇನು ಮಾಡುವುದು ಎಂಬ ಪ್ರಶ್ನೆಯನ್ನು ಪ್ರಧಾನಿಗಳ ಮುಂದೆ ಇಟ್ಟಿದ್ದರು. ಅದಕ್ಕೆ ಶಾಸ್ತ್ರಿಜಿಯವರು “ಕೂಡಲೆ ಸೇನಾದಾಳಿ ಮಾಡಿ. ಪಾಕಿಸ್ತಾನಿ ಸೈನ್ಯವನ್ನು ಹಿಮ್ಮೆಟ್ಟಿಸಿ. ವಾಯುಪಡೆಯ ವಿಮಾನಗಳಿಂದಲೂ ದಾಳಿ ನಡೆಸಿ. ಒಮ್ಮೆ ಆಕ್ರಮಣ ಪ್ರಾರಂಭಗೊಂಡರೆ ಲಾಹೋರ್‍ವರೆಗೂ ಮುನ್ನುಗ್ಗಿ. ಛಾಂಬ್ ಕೈಜಾರುವ ಮೊದಲು ಲಾಹೋರ್‍ನನ್ನು ವಶಪಡಿಸಿಕೊಳ್ಳಿ. ಜಗತ್ತಿಗೆ ಉತ್ತರ ಕೊಡುವ ಜವಾಬ್ದಾರಿ ನನ್ನದು. ಹೋರಾಟ ನಿಮ್ಮದು” ಎಂಬ ಖಡಕ್ ಆದೇಶ ನೀಡಿದ್ದರು. ಪ್ರಧಾನಿಗೆ ಆ ಸಮಯದಲ್ಲಿ ಭಾರತದ ರಕ್ಷಣೆಯಷ್ಟೇ ಮುಖ್ಯವಾಗಿತ್ತು. ಹಾಗಾಗಿ ಸಂಪುಟ ಸಭೆ ಕರೆಯಲಿಲ್ಲ, ಯಾರನ್ನೂ ಕೇಳಲಿಲ್ಲ. ವಿಶ್ವಸಂಸ್ಥೆಯ ಕದ ತಟ್ಟಲಿಲ್ಲ. ಅಂತರಾಷ್ಟ್ರೀಯ ಒತ್ತಡಗಳ ಬಗ್ಗೆಯೂ ಚಿಂತಿಸಲಿಲ್ಲ. ವಿಶ್ವದ ನಾಯಕರು ಏನನ್ನುತ್ತಾರೋ ಎಂದು ಯೋಚಿಸಲಿಲ್ಲ. ಏಳು ನಿಮಿಷದಲ್ಲಿ ಎದೆ ಝಲ್ಲೆನೆಸುವ ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಂಡರು. ಯುದ್ಧದ ಸಮಯದಲ್ಲಿ ಶಾಸ್ತ್ರೀಜಿಯವರು ಸೈನಿಕರನ್ನು ಹುರಿದುಂಬಿಸಿ ಆಡುತ್ತಿದ್ದ ಮಾತುಗಳು, ಭಾಷಣಗಳು, ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ಸೈನ್ಯಕ್ಕೆ ಭೀಮಬಲವನ್ನು ತಂದುಕೊಟ್ಟಿದ್ದವು.
1965ರ ಯುದ್ಧದ ಸಮಯದಲ್ಲಿ ಭಾರತದಲ್ಲಿ ಆಹಾರದ ಕೊರತೆ ಎದುರಾಯಿತು. ವಾಸ್ತವದಲ್ಲಿ ಭಾರತ ಅಮೆರಿಕಾದಿಂದ ಗೋಧಿಯನ್ನು ಆಮದು ಮಾಡಿಕೊಳ್ಳುತ್ತಿತ್ತು.
ಯುದ್ಧದ ಸಮಯದಲ್ಲಿ ಅಮೆರಿಕದ ಅಧ್ಯಕ್ಷ ಜಾನ್ಸನ್ ಪಾಕಿಸ್ತಾನದೊಂದಿ ಗಿನ ಯುದ್ಧವನ್ನು ನಿಲ್ಲಿಸುವಂತೆ ತೀವ್ರ ಒತ್ತಡ ಹಾಕಿದರು. ಆದರೆ ಶಾಸ್ತ್ರೀಜಿ ಆ ಬೆದರಿಕೆ ಸ್ವರೂಪದ ಒತ್ತಡಕ್ಕೆ ಬಗ್ಗಲಿಲ್ಲ. ಆಗ ಅಮೆರಿಕ ಅಧ್ಯಕ್ಷರು ಭಾರತಕ್ಕೆ ಗೋಧಿ ಕಳುಹಿಸುವುದನ್ನು ನಿಲ್ಲಿಸಿಬಿಟ್ಟರು. ಆದರೆ ಶಾಸ್ತ್ರೀಜಿಯವರು ಎದೆಗುಂದಲಿಲ್ಲ. ‘ನೀವು ಕಳುಹಿಸುವ ಗೋಧಿಯನ್ನ ನಮ್ಮ ದೇಶದ ಹಂದಿಗಳೂ ತಿನ್ನುವುದಿಲ್ಲ. ನಿಮ್ಮ ಗೊಡ್ಡು ಬೆದರಿಕೆಗೆ ನಾವು ಬಗ್ಗುವುದೂ ಇಲ್ಲ’ ಎಂಬ ದಿಟ್ಟ ಉತ್ತರ ನೀಡಿದರು. ದೇಶದ ಆಹಾರ ಸಮಸ್ಯೆಯನ್ನು ನೀಗಿಸಲು ವಾರಕ್ಕೆ ಒಂದು ದಿನ ಒಂದು ಹೊತ್ತು ಉಪವಾಸ ಮಾಡುವಂತೆ ದೇಶದ ಜನರಿಗೆ ಕರೆ ನೀಡಿದರು. ‘ಒಂದು ಹೊತ್ತು ಊಟವಿಲ್ಲದಿದ್ದರೂ ಚಿಂತೆಯಿಲ್ಲ. ಆದರೆ ದೇಶದ ಗೌರವ ಮತ್ತು ಸ್ವಾಭಿಮಾನವನ್ನು ಬಿಟ್ಟು ಮತ್ತೊಂದು ದೇಶದ ಬಳಿ ಭಿಕ್ಷೆ ಬೇಡುವುದಿಲ್ಲ’ ಎಂಬ ಕಠಿಣ ನಿಲುವು ತೆಗೆದುಕೊಂಡರು.
ಸೈನಿಕರಿಗೆ ರೈತರಿಗೆ ಜಯವಾಗಲಿ ಪ್ರಧಾನಿಗಳ ಕರೆಗೆ ಇಡೀ ದೇಶದಲ್ಲಿ ಅಭೂತಪೂರ್ವ ಸ್ಪಂದನೆ ದೊರೆಯಿತು. ಕೋಟ್ಯಂತರ ಜನ ಪ್ರತಿ ಸೋಮವಾರ ಉಪವಾಸ ಮಾಡಲು ಪ್ರಾರಂಭಿಸಿದರು. ಸ್ವತಃ ಪ್ರಧಾನಿಗಳೇ ತಮ್ಮ ಹೆಂಡತಿ ಲಲಿತಾ ಶಾಸ್ತ್ರೀಜಿಯವರಿಗೆ ಪ್ರತಿ ಸೋಮವಾರ ಸಂಜೆ ಅಡುಗೆ ಮಾಡಬಾರದೆಂದೂ, ಇಡೀ ಕುಟುಂಬ ಉಪವಾಸ ಮಾಡಬೇಕೆಂದೂ ತಾಕೀತು ಮಾಡಿದರು.
ಶಾಸ್ತ್ರೀಜಿಯವರ ದಿಟ್ಟ ನಿರ್ಧಾರ ಮತ್ತು ಸೈನ್ಯಕ್ಕೆ ನೀಡಿದ ಪರಮಾಧಿಕಾರದ ಪರಿಣಾಮ ಭಾರತ ಪಾಕಿಸ್ತಾನವನ್ನು ಬಗ್ಗು ಬಡಿದಿತ್ತು. ಭಾರತೀಯ ಸೈನ್ಯ ಲಾಹೋರ್‍ನ ಹೆಬ್ಬಾಗಿಲಿಗೆ ಬಂದು ನಿಂತಿತ್ತು. ಮುಂದಿನ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದ ಪ್ರಮುಖ ನಗರಗಳು ಭಾರತದ ಕೈವಶವಾಗುವುದರಲ್ಲಿತ್ತು. ಅಷ್ಟರಲ್ಲಿ ಪಾಕಿಸ್ತಾನ ಲಜ್ಜೆಬಿಟ್ಟು ಅಮೆರಿಕಾ, ರಷ್ಯಾ ಮತ್ತು ವಿಶ್ವಸಂಸ್ಥೆಯ ಮುಂದೆ ಮಂಡಿಯೂರಿ ಕುಳಿತು ಯುದ್ಧ ನಿಲ್ಲಿಸಲು ಭಾರತಕ್ಕೆ ಸೂಚಿಸುವಂತೆ ಗೋಗರೆಯಲಾರಂಭಿಸಿತು. ಹಾಗಾಗಿ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿತು. ಶಾಸ್ತ್ರೀಜಿ ಶಾಂತಿ ಮಾತುಕತೆಗೆ ತಾಷ್ಕೆಂಟ್‍ಗೆ ಹೊರಟರು. ತಾಷ್ಕೆಂಟ್‍ನಲ್ಲಿ ಸತತ ಏಳು ದಿನಗಳ ಕಾಲ ಶೃಂಗಸಭೆ ನಡೆಯಿತು. ಅಂತಿಮವಾಗಿ ಶೃಂಗಸಭೆಯಲ್ಲಿ ಶಾಂತಿ ಸಂಧಾನಕ್ಕೆ ಉಭಯ ನಾಯಕರಿಂದ ಸಹಿ ಬಿತ್ತು.
ತಾಷ್ಕೆಂಟ್ ಶೃಂಗಸಭೆಯಲ್ಲಿ ಏಳು ದಿನಗಳ ಕಾಲ ನಡೆದ ಶೃಂಗಸಭೆಯಲ್ಲಿ ಶಾಂತಿ ಸಂಧಾನಕ್ಕೆ ಉಭಯ ನಾಯಕ ರಿಂದ ಸಹಿ ಬಿತ್ತು.ಆದರೆ ಆ ಸಹಿಯ ಶಾಯಿ ಆರುವ ಮುನ್ನವೇ ಶಾಸ್ತ್ರೀಜಿ ಸಾವಿನ ಸುದ್ದಿ ಮಧ್ಯರಾತ್ರಿ ಬರಸಿಡಿಲಿನಂತೆ ಭಾರತಕ್ಕೆ ಬಡಿಯಿತು. ಅಲ್ಲಿಗೆ ದೇಶದ ಇತಿಹಾಸದಲ್ಲಿ ಅತ್ಯಂತ ಮೌಲ್ಯಯುತವಾದ ಅಧ್ಯಾಯವೊಂದು ಕೊನೆಗೊಂಡಿತು.
ಸರಳ ವ್ಯಕ್ತಿತ್ವ:
ಶಾಸ್ತ್ರೀಜಿಯವರದ್ದು ಮೇರು ವ್ಯಕ್ತಿತ್ವ. ಅವರೊಬ್ಬ ಅಸಾಧಾರಣ ಜನನಾಯಕ. ಸಹನೆ, ಸಹಾನುಭೂತಿಯ ಪ್ರತಿರೂಪ. ದೃಢ ನಿಶ್ಚಯದ ಮೂರ್ತರೂಪ. ಅವರು ಭಾರತ ದೇಶದ ಸಾಂಸ್ಕೃತಿಕ ರಾಯಭಾರಿಯಾಗಿ ಇಲ್ಲಿನ ಸಾವಿರಾರು ವರ್ಷಗಳ ಪರಂಪರೆ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಪ್ರತಿನಿಧಿಸಿದ್ದರು. ಬಹುಶಃ ಅವರು ಇನ್ನಷ್ಟು ವರ್ಷ ಬದುಕಿದ್ದರೆ ಭಾರತದ ಭವಿಷ್ಯವನ್ನೇ ಬದಲಿಸಿಬಿಡುತ್ತಿದ್ದರು.
1965 ನೇ ಇಸವಿ. ಲಾಲ್ ಬಹದ್ದೂರ್ ಶಾಸ್ತ್ರಿ ಭಾರತದ ಪ್ರಧಾನಿಯಾಗಿದ್ದರು. ಅವರ ಮನೆಯವರ ಒತ್ತಾಸೆಗೆ ಮಣಿದು ಫಿಯೆಟ್ ಕಾರು ಖರೀದಿಸಲು ಮುಂದಾದರು. ಆ ತನಕ ಶಾಸ್ತ್ರಿ ಅವರಲ್ಲಿ ಸ್ವಂತ ಕಾರು ಇರಲಿಲ್ಲ. ಪಿಯೆಟ್ ಕಾರಿನ ಬೆಲೆ ಎಷ್ಟೊಂದು ಕೇಳಿದರು. ಆವಾಗ ಕಾರಿನ ದರ 12,000/ ರೂ. ಆದರೆ ಶಾಸ್ತ್ರಿ ಅವರ ಬ್ಯಾಂಕ್ ಖಾತೆಯಲ್ಲಿದ್ದದ್ದು ಕೇವಲ 7,000/- ರೂ. ಉಳಿದ 5,000/- ಕ್ಕೆ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಲೋನ್‌ಗೆ ಅಪ್ಪೆ ಮಾಡಿದರು. ಬ್ಯಾಂಕ್ ಕೇವಲ ಒಂದೂವರೆ ಗಂಟೆಯಲ್ಲಿ ಲೋನ್ ಸ್ಯಾಂಕ್ಷನ್ ಮಾಡಿತು. ಆದರೆ ಈ ನಿಯಮವನ್ನು ಒಪ್ಪಿಕೊಳ್ಳದ ಪ್ರಧಾನಿ ಶಾಸ್ತ್ರಿ ಸಾಮಾನ್ಯರಿಗೆ ಮಾಡುವಂತೆ ಬ್ಯಾಂಕ್ ಮೀಟಿಂಗ್‌ನಲ್ಲಿ ಪಾಸ್ ಮಾಡಿ ಕ್ಯೂ ಪ್ರಕಾರ ಲೋನ್ ನೀಡಿ, ಅದೇ ನಿಯಮದ ಪ್ರಕಾರ ಲೋನ್ ಕಟ್ಟುತ್ತೇನೆ. ನಾನು ಪ್ರಧಾನಿಯೆಂದು ವಿನಾಯಿತಿ ಬೇಡ ಎಂದರು. ಬ್ಯಾಂಕ್ ಮತ್ತೆ ಅದೇ ರೀತಿ ಪ್ರೋಸೆಸ್ ಮುಂದುವರೆಸಿತು.
ನಂತರದ ದಿನಗಳಲ್ಲಿ ಲೋನ್‌ಸಹಿತ ಕಾರು ಶಾಸ್ತ್ರಿಯವರ ಅಂಗಳಕ್ಕೆ ಬಂತು. 1966 ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಮರಣವನ್ನಪ್ಪಿದರು. ಬ್ಯಾಂಕ್‌ನಿಂದ ಅವರ ಪತ್ನಿ ಲಲಿತಾ ಶಾಸ್ತ್ರಿ ಅವರಿಗೆ ಲೋನ್ ಪಾವತಿಸುವಂತೆ ಪತ್ರ ಬಂತು. ಪತ್ನಿ ತನ್ನ ಕುಟುಂಬದ ಪೆನ್‌ಷನ್ ಮೊತ್ತದಲ್ಲಿ ತಿಂಗಳು ತಿಂಗಳು ಪಾವತಿಸುತ್ತೇನೆಂದು ಬ್ಯಾಂಕ್‌ಗೆ ಮನವಿ ಮಾಡಿದರು. ಅದರಂತೆ ಪಾವತಿಸಿ ಲೋನ್ ಮುಗಿಸಿದರು ಕೂಡಾ. ಆ ಫಿಯೆಟ್ ಕಾರು ಈಗಲೂ ಶಾಸ್ತ್ರೀಜಿ ಮನೆಯಲ್ಲಿದೆ. ಶಾಸ್ತ್ರಿಯವರ ಪುತ್ರ ಉದ್ಯೋಗಕ್ಕಾಗಿ ಇಲಾಖೆಯೊಂದಕ್ಕೆ ಅರ್ಜಿ ಹಾಕಿದ್ದರು. ಈ ಹಿಂದೆ ಮಗನನ್ನು ಸೈಂಟ್ ಸ್ಟೀಫನ್ ಕಾಲೇಜಿಗೆ ಸೇರಿಸುವಾಗ ಫಾಮ್‌ರ್ನಲ್ಲಿ ತಂದೆಯ ವೃತ್ತಿ ಕಾಲಂನಲ್ಲಿ ಸರಕಾರಿ ಸೇವಕ ಅಂತ ಶಾಸ್ತ್ರಿ ನಮೂದಿಸಿದ್ದರು.
ಉದ್ಯೋಗದ ದಾಖಲಾತಿಗಾಗಿ ಸಾಮಾನ್ಯರೊಂದಿಗೆ ಕ್ಯೂನಲ್ಲಿ ನಿಂತಿದ್ದ ಶಾಸ್ತ್ರಿ ಪುತ್ರ ತಮ್ಮ ಸರದಿ ಬಂದಾಗ ಕಾಲೇಜು ಸರ್ಟಿಫಿಕೇಟ್ ಪರಿಶೀಲಿಸಿದ ಇಲಾಖೆಯ ಕ್ಲಾರ್ಕ್ ತಂದೆಗೇನು ಸರಕಾರಿ ಕೆಲಸ ಎಂದು ಪುತ್ರನಲ್ಲಿ ಪ್ರಶ್ನಿಸಿದರು. ಮಗ ನನ್ನ ತಂದೆ ದೇಶದ ಪ್ರಧಾನ ಮಂತ್ರಿ ಅಂದಾಗ ಕ್ಲಾರ್ಕ್ ಬೆಚ್ಚಿಬಿದ್ದರು. ಅಂತಹ ಸರಳ ವ್ಯಕ್ತಿತ್ವ ದೇಶದ ದ್ವಿತೀಯ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರದ್ದಾಗಿತ್ತು. ಅವರ ಮನೆಯವರಿಗೂ ಅಂತಹುದೇ ಸರಳ ಜೀವನವನ್ನು ಕಲಿಸಿದ್ದರು.
ರಾಜಕಾರಣಿಗಳು ಹೀಗಿರುತ್ತಾರೆಂದರೆ ನಂಬಲಿಕ್ಕೇ ಸಾಧ್ಯವಿಲ್ಲ, ಹಾಗೆ ಬಾಳಿದವರು
ಮಾನ್ಯ ಲಾಲ್ ಬಹದ್ದೂರ್ ಶಾಸ್ತ್ರಿಗಳು. ನಾಯಕತ್ವಕ್ಕೆ ಮಾದರಿಯಾದವರು.