ವಿಶೇಷ ಲೇಖನ : ಸುಭಾಷ್ ಚಂದ್ರ ಬೋಸ್ ಎಂಬ ಅತ್ಯದ್ಭುತ ಚೇತನ

ಸಾವಿನ ಜೊತೆಗೆ ಸೆಣಸಿದ ,ಸಾವಿನಲ್ಲೂ ಗೂಢವಾಗಿಯೆ ಉಳಿದ ದೇಶದ ಮಹಾನ್ ಸ್ವತಂತ್ರ ಹೋರಾಟಗಾರ ಸುಭಾಷ್ ಚಂದ್ರಬೋಸ್ ಎಂದರೆ ಪ್ರತಿಯೊಬ್ಬ ಭಾರತೀಯನ ಹೆಮ್ಮೆ.

     (ಚಿತ್ರ ಕೃಪೆ: Anupama Padanolana)

ಭಾರತೀಯ ಸ್ವತಂತ್ರ ಸಂಗ್ರಾಮದಲ್ಲಿ ಸುಭಾಷ್ ರದ್ದು ಬಹು ದೊಡ್ಡ ಹೆಸರು. ಬ್ರಿಟಿಷರನ್ನು ಓಡಿಸಿ ಭಾರತಕ್ಕೆ ಸ್ವತಂತ್ರ ತಂದುಕೊಡುವಲ್ಲಿ ಶ್ರಮಿಸಿದ ಸೇನಾನಿಗಳಲ್ಲಿ ಕೊಂಚ ಭಿನ್ನವಾಗಿ ತಮ್ಮ ಪ್ರಯತ್ನಗಳನ್ನು ನಡೆಸುತ್ತಿದ್ದ ಕಾರಣದಿಂದಲೇ ಸುಭಾಷ್ ಚಂದ್ರ ಬೋಸ್ ಅಸಾಮಾನ್ಯ ಸೇನಾನಿ ಎನಿಸಿಕೊಂಡಿದ್ದಾರೆ. ಇವರ ಜೀವನ ಎಷ್ಟು ವಿಚಿತ್ರವಾಗಿತ್ತೋ ಅಂತೆಯೇ ಇವರ ಸಾವು ಸಹಾ ಇಂದಿಗೂ ನಿಗೂಢವಾಗಿದೆ.

ಜನವರಿ 23ರಂದು ಭಾರತ ಕಂಡ ಅಸಾಮಾನ್ಯ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್‌ರ 126ನೇ ಜಯಂತಿ.  ಸ್ವರಾಜ್ಯ ಚಳುವಳಿಯ ಅನೇಕ ನಾಯಕರಿಂದ ವ್ಯಂಗ್ಯ-ವಿರೋಧಗಳನ್ನೆದುರಿಸಿದರೂ, ಹಿಮಾಲಯದೆತ್ತರ ಧೈರ್ಯ-ಸಾಹಸ ತೋರಿ, ಲಕ್ಷಾಂತರ ಯುವಕರಿಗೆ ಸ್ಫೂರ್ತಿತುಂಬಿದ ಈ ಅಮರಸೇನಾನಿ...

ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬ ಸುಭಾಷ್‌ರ ದಿಟ್ಟನಿಲುವಿನ ಪ್ರತಿಧ್ವನಿಯಾಗಿತ್ತು ಆ ಮಾತು. ಕಾಂಗ್ರೆಸ್‌ನ ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯ ಹೋರಾಟಕ್ಕೆ ಬಲತುಂಬಿದವರು ಸುಭಾಷರು. ತಾನು ಕಷ್ಟಪಟ್ಟುಗಳಿಸಿದ್ದ ಐ.ಸಿ.ಎಸ್. ಪದವಿಯನ್ನೇ ತಿರಸ್ಕರಿಸಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಬೋಸ್‌ರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ.

ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿ ಮಾಡಿದವರಲ್ಲ. ಶೀಘ್ರ ಸ್ವಾತಂತ್ರ್ಯ ಪ್ರಾಪ್ತಿಗಾಗಿ ಅವರು ಮಂಡಿಸುತ್ತಿದ್ದ ವಾದಗಳು, ಅದಕ್ಕಾಗಿ ಶ್ರಮಿಸಬೇಕಾದ ತ್ವರಿತ ಸಿದ್ಧತೆಗಳ ಕುರಿತು ಬೋಸ್‌ರ ನಿಲುವುಗಳೆಲ್ಲ ಕಾಂಗ್ರೆಸ್‌ನ ಮಂದಗಾಮಿ ಗುಂಪಿಗೆ ಅಸಹ್ಯವಾಗಿತ್ತು. ಸ್ವತಃ ಗಾಂಧೀಜಿಯವರೇ ಹಲವು ಬಾರಿ ಬೋಸ್‌ರನ್ನು ಟೀಕಿಸಿದ್ದರು! ಅವರಿಗೆ ದೂರಗಾಮಿ ಚಿಂತನೆ ಇಲ್ಲ ಎಂಬ ಆರೋಪ. ಆದರೆ 1938ರಲ್ಲಿ ಭಾರತದ ವಿಭಜನೆಯ ಮುಸ್ಲಿಂಲೀಗ್-ಬ್ರಿಟಿಷರ ತಂತ್ರಗಾರಿಕೆಯ ಕುರಿತು ಮೊದಲಬಾರಿಗೆ ಬಹಿರಂಗವಾಗಿ ಎಚ್ಚರಿಸಿದರೂ ಮಂದಗಾಮಿಗಳಿಗೆ ಕೇಳಿಸಲಿಲ್ಲ. ಪರಿಣಾಮವಾಗಿ ೯ ವರ್ಷದಲ್ಲೇ ದೇಶ ಹೋಳಾಯಿತು! ಬೋಸ್‌ರ ದೂರಗಾಮಿ ಚಿಂತನೆಗಳಿಗೂ ಕವಡೆ ಕಿಮ್ಮತ್ತಿನ ಬೆಲೆ ಕೊಡದ ಕಾಂಗ್ರೆಸ್‌ನಿಂದ ಸ್ವತಃ ಹೊರಬಂದವರು ಬೋಸ್.


ಕೇವಲ 48ವರ್ಷದ ಅಲ್ಪಾಯಸ್ಸಿನಲ್ಲಿ ಇತಿಹಾಸಾರ್ಹ ಸಾಧನೆಗೈದ ನೇತಾಜಿ, ಕ್ರಾಂತಿಮಾರ್ಗದ ವೇಳೆಯಲ್ಲೂ ವಿವೇಕಾನಂದ–ಅರವಿಂದರಿಂದ ಪಡೆದ ಆಧ್ಯಾತ್ಮನಿಷ್ಠೆಯನ್ನು ಮೈಗೂಡಿಸಿಕೊಂಡವರು. ’ಕ್ರಾಂತಿಕಾರಿ’ ಎಂಬ ಶಬ್ದಕ್ಕೆ ಅನೇಕ ಅಪಾರ್ಥಗಳನ್ನು ಹಚ್ಚಿ ವ್ಯಂಗ್ಯ ಮಾಡಿದಾಗಲೂ ಕ್ರಾಂತಿಯೆಂದರೇನು? ಕ್ರಾಂತಿಕಾರಿ ಯಾರು? ಎಂಬ ಕುರಿತು ವಿವರವಾಗಿ ಭಾಷಣಗಳಲ್ಲಿ ಉಲ್ಲೇಖಿಸಿದ್ದರು. ಅಭಿಪ್ರಾಯ ಭಿನ್ನತೆಯಿದ್ದರೂ ಬೋಸ್‌ರ ದೇಶಭಕ್ತಿ, ಸ್ವಾತಂತ್ರ್ಯ ನಿಷ್ಠೆಕುರಿತು ಗಾಂಧೀಜಿ ಹಾಗೂ ಅನುಯಾಯಿಗಳಿಗೆ ಅಪಾರ ಗೌರವವಿತ್ತು. ಆದರೇನು ಫಲ? ಬೋಸರಿಗೆ ಹೆಗಲುಕೊಡುವ, ಅವರ ಮನೋಜ್ಞ, ನಿರ್ಣಾಯಕ ಹಾಗು ಸ್ಪಷ್ಟ ಹೋರಾಟಗಳ ರೂಪುರೇಷೆಗಳಿಗೆ ಬೆಂಬಲ ವ್ಯಕ್ತವಾಗದೇ ಹೋದದ್ದು ದುರಂತ.

  • ಸುಭಾಷ್‌ಚಂದ್ರ ಬೋಸ್ ಜನಿಸಿದ್ದು 1897ರ ಜನವರಿ 23ರಂದು, ಒರಿಸ್ಸಾದ ಕಟಕ್‌ನಲ್ಲಿ. ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ. ಆ ದಂಪತಿಗಳ 9 ಮಕ್ಕಳಲ್ಲಿ ಸುಭಾಷ್ 6ನೇಯವರು.
  • ಕಟಕ್‌ನಲ್ಲಿ ರ‍್ಯಾವೆನ್‌ಶಾ ಕೊಲಿಜಿಯೇಟ್ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ, ಅಲ್ಲಿ ಮುಖ್ಯೋಪಾಧ್ಯಾಯ ಬೇಣಿಮಾಧವದಾಸ್‌ರ ರಿಂದ ಪ್ರೇರಣೆ, ಮುಂದೆ ವಿವೇಕಾನಂದರ ಸಾಹಿತ್ಯಗಳು, ಪತ್ರಗಳು ಮತ್ತು ’ಕೊಲೊಂಬೋದಿಂದ ಆಲ್ಮೋರಾಕ್ಕೆ’ ಉಪನ್ಯಾಸಗಳಿಂದ ಪ್ರಭಾವಿತರಾದ ಬೋಸರು ಅರವಿಂದರ ’ಆರ್ಯ’ ಮಾಸಪತ್ರಿಕೆಯ ತಪ್ಪದ ಓದುಗ!
  • 1919ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ, ನಂತರ 1919ರ ಸೆಪ್ಟೆಂಬರ್ 15ರಂದು ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣ.1920ರ ಸೆಪ್ಟಂಬರ್‌ನಲ್ಲಿ ನಾಲ್ಕನೇ ಸ್ಥಾನಿಗರಾಗಿ ಐ.ಸಿ.ಎಸ್ ಪದವಿ ಪ್ರಾಪ್ತಿ.
  • ವಿದೇಶೀ ನೌಕರಿ ಒಲ್ಲೆ ಎಂದು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನು 1921ರ ಎಪ್ರಿಲ್ 22ರಂದು ಬ್ರಿಟಿಷ್ ಸರ್ಕಾರದ ಭಾರತ ವ್ಯವಹಾರ ಸಚಿವ ಎಡ್ವಿನ್ ಮಾಂಟೆಗುಗೆ ಪತ್ರವೊಂದನ್ನು ಬರೆದು ಮರಳಿಸಿದ್ದರು ಬೋಸ್! 20ತಿಂಗಳ ಇಂಗ್ಲೆಂಡ್ ವಾಸದ ನಂತರ 1921ರ ಜುಲೈ 16ರಂದು ಮುಂಬಯಿಗೆ ಮರಳಿದರು ಬೋಸ್. ಅಂದೇ ಗಾಂಧೀಜಿ ಜತೆ ಮೊದಲ ಭೇಟಿ.
  • 1921ರ ಆಗಸ್ಟ್‌ನಿಂದ ಚಿತ್ತರಂಜನ್‌ದಾಸ್‌ರ ಮಾರ್ಗದರ್ಶನದಲ್ಲಿ ಯುವಕರ ಸಂಘಟನೆಗೆ ಆದ್ಯತೆ. ಚಳುವಳಿಯ ಸಂದರ್ಭವೊಂದರಲ್ಲಿ ಮ್ಯಾಜಿಸ್ಟ್ರೇಟರು 6 ತಿಂಗಳ ಸಜೆ ಘೋಷಿಸಿದಾಗ ’ಬರಿಯ 6 ತಿಂಗಳೇ? ನನ್ನದೇನು ಕೋಳಿಕದ್ದ ಅಪರಾಧವೇ?’ ಎಂದಿದ್ದರು ಬೋಸ್!
  • ಕಾಂಗ್ರೆಸ್‌ನ ಡೋಲಾಯಮಾನ ನೀತಿಗಳಿಗೆ ಬೇಸತ್ತು ಚಿತ್ತರಂಜನ್‌ದಾಸ್‌ರಿಂದ ’ಸ್ವರಾಜ್ಯಪಕ್ಷ ಸ್ಥಾಪನೆ. ಬೋಸ್‌ರು ದಾಸ್‌ರ ಜತೆಗೇ ಚಟುವಟಿಕೆಗಳಲ್ಲಿ ಭಾಗಿ. 1923ರ ಅಕ್ಟೋಬರ್‌ನಿಂದ ದಾಸ್‌ರು ಸ್ಥಾಪಿಸಿದ್ದ ’ಫಾರ್ವರ್ಡ್’ ದಿನಪತ್ರಿಕೆಯ ನಿರ್ವಹಣೆಯ ಜವಾಬ್ದಾರಿ. 1925ರ ಜೂನ್ 16, ದಾಸ್‌ರ ನಿಧನ, ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಬೋಸ್‌ರ ಬಂಧನ, ಬಿಡುಗಡೆ.
  • 1927ರ ನವೆಂಬರ್‌ನಲ್ಲಿ ಬಂಗಾಳಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆ, ಆದರೆ ಗಾಂಧಿ ಪ್ರಣೀತ ಮಂದ ಮಾರ್ಗಕ್ಕಿಂತ ಸುಭಾಷ್‌ರದು ತೀರಾ ಭಿನ್ನ ಎಂಬುದು ಕ್ರಮೇಣ ಗೊತ್ತಾಯಿತು. ಹತ್ತಾರು ಚಳುವಳಿಗೆ ನೇತೃತ್ವ, ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆ.
  • 1933 ಫೆಬ್ರವರಿ 23ರಂದು ಯೂರೋಪಿನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಪರ ಅಭಿಯಾನ. ಇಂಗ್ಲೆಂಡ್, ಆಸ್ಟ್ರಿಯಾ, ಇಟೆಲಿ ವಿಯೆನ್ನಾಗಳ ಭೇಟಿ, ತ್ವರಿತಗತಿಯ ಪ್ರವಾಸ, ಮಿಂಚಿನ ಓಡಾಟ. ಸ್ವಿಟ್ಜರ್ಲೆಂಡ್, ಚೆಕೋಸ್ಲೋವಾಕಿಯಾ, ಪೋಲೆಂಡ್, ಜರ್ಮನಿಗಳಲ್ಲಿ ಭಾರತದ ಪರ ಪ್ರಚಾರ. ಇಟೆಲಿ ಪ್ರಧಾನಿ ಬೆನಿತೋ ಮುಸ್ಸೋಲಿನಿ ಜತೆ ಚರ್ಚೆ. 1926 ಏಪ್ರಿಲ್ 8 ರಂದು ಮರಳಿ ಭಾರತಕ್ಕೆ, ಬಂದರಲ್ಲೇ ಬಂಧನ. 1937ರಲ್ಲಿ ಮತ್ತೆ ಆಸ್ಟ್ರಿಯಾ ಪಯಣ.
  • ಕಾಂಗ್ರೆಸ್‌ನ ಅಖಿಲಭಾರತ ಅಧಿವೇಶನದ ಅಧ್ಯಕ್ಷತೆ 1938ರ ಫೆಬ್ರವರಿ 19ರಂದು, ಹರಿಪುರದಲ್ಲಿ. ವಿದೇಶೀ ನೆಲಗಳ ಓಡಾಟದಿಂದ ಪಡೆದ ರಾಜಕೀಯ ಅನುಭವ-ಒಳನೋಟಗಳಿಂದ ಬ್ರಿಟಿಷರ ಒಡೆದು ಆಳುವನೀತಿಕುರಿತ ಕ್ಷಾತ್ರತೇಜದ ಐತಿಹಾಸಿಕ ಭಾಷಣ, ದೇಶ ವಿಭಜನೆಯ ಬ್ರಿಟಿಷರ ತಂತ್ರದ ಸೂಚನೆ. ಮುಂದಿನ ೯ ವರ್ಷದಲ್ಲೇ ಸತ್ಯವಾದ ಬೋಸ್ ಭವಿಷ್ಯವಾಣಿ! ಆರೆಸ್ಸೆಸ್‌ನ ’ಸಂಘ ಶಿಕ್ಷಾವರ್ಗ’ ಶಿಬಿರಕ್ಕೆ ೧೯೩೮ರಲ್ಲಿ ಭೇಟಿಗೆ ಒಪ್ಪಿಗೆ, ಸಂಘದ ಧ್ಯೇಯ – ಅನುಶಾಸನ ಕಾರ‍್ಯಪದ್ಧತಿ ಕುರಿತ ಶ್ಲಾಘನೆ. ಆದರೆ ಕಾರಣಾಂತರಗಳಿಂದ ಭೇಟಿ ಸಾಧ್ಯವಾಗಲಿಲ್ಲ.
  •  ಕಾಂಗ್ರೆಸ್ ಅಧ್ಯಕ್ಷಗಾದಿಗೆ ನಡೆದ ಮೊತ್ತಮೊದಲ ಚುನಾವಣೆಯಲ್ಲಿ ಡಾ|| ಪಟ್ಟಾಭಿ ಸೀತಾರಾಮಯ್ಯರ ವಿರುದ್ಧ 215 ಮತಗಳ ಗೆಲುವು! ಸುಭಾಷ್ ವಿರುದ್ಧ ಹಲವಾರು ಟೀಕೆಗಳು, ಅನಗತ್ಯ ಋಣಾತ್ಮಕ ಮಾತುಗಳು ಗಾಂಧೀಜಿಯಿಂದ. ಸ್ವಾತಂತ್ರ್ಯದ ಮೋಡಗಳು ಸಮೀಪ ಇರುವಂತೆಯೇ ಬ್ರಿಟಿಷ್ ಸರ್ಕಾರದ ಜತೆ ದುರ್ಬಲ ಕಾಂಗ್ರೆಸ್‌ನ ತಾರ್ಕಿಕ ನಡೆಗಳಿಂದ ಬೇಸತ್ತು ಕಾಂಗ್ರೆಸ್‌ಗೆ ರಾಜೀನಾಮೆ, ’ಫಾರ್‌ವರ್ಡ್ ಬ್ಲಾಕ್’ ಸ್ಥಾಪನೆ.
  • 1940, ಜೂನ್ 18ರಂದು ಡಾ|| ಹೆಡಗೇವಾರ್ ಜತೆ ಭೇಟಿ ಆದರೆ ತೀವ್ರ ಜ್ವರದಿಂದ ಹಾಸಿಗೆ ಹಿಡಿದಿದ್ದ ಡಾ|| ಹೆಡಗೇವಾರ್ ಜತೆ ಸಾಧ್ಯವಾಗದ ಮಾತುಕತೆ. ಮೂರೇದಿನದಲ್ಲಿ ಡಾ|| ಹೆಡಗೇವಾರ್ ನಿಧನ. ಕೈ ತಪ್ಪಿದ ಮಹಾಮಿಲನ. ನಂತರ ವೀರ ಸಾವರ್ಕರ್ ಭೇಟಿ.
  • ಬೋಸ್ ಕಾಣೆಯಾಗಿದ್ದಾರೆ’ ಎಂಬ ಸುದ್ದಿ 1941 ಜನವರಿ 26ಕ್ಕೆ! ಕಾಬೂಲ್ ಮೂಲಕ ಬರ್ಲಿನ್ ಸೇರಿದ ಬೋಸ್‌ರಿಂದ ಸೈನಿಕ ಕಾರ‍್ಯಾಚರಣೆ. ’ಫ್ರೀ ಇಂಡಿಯಾ ಸೆಂಟರ್’ 1941 ನವೆಂಬರ್ 2ಕ್ಕೆ ಉದ್ಘಾಟನೆ, ’ಆಜಾದ್ ಹಿಂದ್’ ಲಾಂಛನ, ’ಜೈಹಿಂದ್’ ಘೋಷಣೆ, ಬೋಸರಿಗೆ ’ನೇತಾಜಿ’ ಬಿರುದು.
  • ಬಲಿಷ್ಠಗೊಂಡ ಆಜಾದ್ ಹಿಂದ್ ಸೇನೆಗೆ ದೌಡಾಯಿಸುತ್ತಿದ್ದ ನಿವೃತ್ತಯುದ್ಧ ಕೈದಿಗಳು. ಮುಂದಿನ ದಿನಗಳಲ್ಲಿ ಪಕ್ವ ಸೈನ್ಯವಾಗಿ ರೂಪುಗೊಂಡ ಇಂಡಿಯನ್ ನ್ಯಾಷನಲ್ ಆರ್ಮಿ (ಐ.ಎನ್.ಎ). ಪಾದರಸದಂತೆ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಓಡಾಡಿ ಸ್ವರಾಜ್ಯ ಹೋರಾಟಕ್ಕೆ ಅಗಾಧ ಬೆಂಬಲ ಪಡೆದ ಬೋಸ್‌ರಿಂದ ಆರ್ಜೀ-ಹುಕುಮಂತ್-ಎ-ಆಜಾದ್ ಹಿಂದ್ (ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ) ಸ್ಥಾಪನೆ; ಐಎನ್‌ಎಯ ಕಮಾಂಡರ್ ಇನ್ ಚೀಫ್ ಆಗಿ ಬೋಸ್.
  • 1945ರ ಆಗಸ್ಟ್18ರಂದು ದಕ್ಷಿಣ ವಿಯೆಟ್ನಾಂನ ಸೈಗಾನ್‌ನಿಂದ ವಿಮಾನಹತ್ತಿದ ಸುಭಾಷ್, ವಿಮಾನ ಸ್ಫೋಟದಿಂದಾಗಿ ನಿಧನ. ಆ ಕುರಿತು ಸ್ಪಷ್ಟಗೊಳ್ಳದ ಅನೇಕ ವಿವಾದಗಳು ಇಂದಿಗೂ ಇದೆ. ಅನ್ವೇಷಣಾ ಸಮಿತಿ ನೇಮಿಸಿದರೂ, ಸಾವನ್ನೊಪ್ಪದ ಅನೇಕಮಂದಿ ಬಹಳವರ್ಷ ನೇತಾಜಿ ಬದುಕಿದ್ದಾರೆಂದೇ, ತಿಳಿದಿದ್ದರುಜರ್ಮನ್ ಸೇನಾಕೇಂದ್ರಗಳಿಗೆ ಸೈನಿಕ ತರಬೇತಿ, ಬರ್ಲಿನ್ ರೇಡಿಯೋದಲ್ಲಿ ಆಗಾಗ ಭಾಷಣ, ಹಿಟ್ಲರ್ ಜತೆ ಭೇಟಿ. ಜಪಾನ್‌ಗೆ ತೆರಳಿ ಅಲ್ಲಿಂದ ಪೂರ್ವಾಂಚಲ ಭಾರತದ ಗಡಿಗಳಲ್ಲಿ ಸೈನ್ಯ ಸಜ್ಜು ಮಾಡಲು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಮೂಲಕ ಭೂಗತ ಚಟುವಟಿಕೆ.
  • ಬೋಸರು ಆಗಾಗ ಹೇಳುತ್ತಿದ್ದರು ’ನೀವು ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ. ಸ್ವಾತಂತ್ರ್ಯವೆಂಬುದು ಯಾರೂಕೊಡುವಂಥ ಸರಕಲ್ಲ ಅದು ನಾವು ಪಡೆದುಕೊಳ್ಳಬೇಕಾದದ್ದು!’

ಬೋಸ್‌ರಂತಹ ಮಹಾನ್ ರಾಷ್ಟ್ರನಾಯಕನ ಜೀವನದ ಘಟನೆಗಳ ಮೆಲುಕೇ ಸ್ಫೂರ್ತಿಯುತ. ಕಲಿಯಬೇಕಾದ ಪಾಠಗಳೂ ಹತ್ತಾರು. ಅತ್ಯುತ್ತಮ ರಾಜತಾಂತ್ರಿಕ ಸಂಬಂಧ ಹೊಂದಿದ್ದ ಬೋಸರು ರಾಷ್ಟಕ್ಕೇ ದಿಗ್ದರ್ಶನ ಮಾಡಿದವರು. ಆ ಧೀಮಂತ ನಾಯಕನ ಜೀವನದಿಂದ ಸಿಗುವ ಅಖಂಡ ಪ್ರೇರಣೆ ಯುವಜನತೆಗೆ ದಾರಿದೀಪವಾಗಲಿ.

ದುಃಖದ ಸಂಗತಿಯೆಂದರೆ ಜೀವವನ್ನೇ ಪಣಕ್ಕಿಟ್ಟು ಹೋರಾಡಿದರೂ ತ್ರಿವರ್ಣ ಧ್ವಜ ಹಾರಿಸೋದಿರ್ಲಿ, ಸ್ವತಂತ್ರ ಭಾರತದ ನೆಲದಲ್ಲಿ ಕಾಲಿಡಲೂ ಸಾಧ್ಯವಾಗಲೇ ಇಲ್ಲ, ಭಾರತದ ಮೊದಲ ಪ್ರಧಾನಿಯಾಗಬೇಕಿತ್ತು, ಅದೂ ಆಗಲಿಲ್ಲ.

ಏನೇ ಆದರೂ, ಸುಭಾಷರು ನಾಡುಕಂಡ ಶ್ರೇಷ್ಠ ಸ್ವರಾಜ್ಯ ಹೋರಾಟಗಾರರಲ್ಲಿ ಒಬ್ಬರು. ಭಾರತದ ಸೈನ್ಯಬಲದ ಕುರಿತು, ಗಡಿ ರಕ್ಷಣೆ ಕುರಿತು ಅವರಿಗಿದ್ದ ದೃಷ್ಟಿಕೋನ ಇಂದಿನವರೆಗೂ ಯಾವುದೇ ರಕ್ಷಣಾ ಸಚಿವರಿಗೆ ಅರ್ಥವಾಗಿಲ್ಲ. ತಂತ್ರಜ್ಞಾನದ ಆವಿಷ್ಕಾರಗಳು ಇನ್ನೂ ಪೂರ್ತಿ ರೆಪ್ಪೆ ತೆರೆಯದಿದ್ದಾಗಲೂ ಬೋಸ್‌ರ ರಾಷ್ಟ್ರೀಯ ಸಧೃಢತೆಯ ಚಿಂತನೆ ಅದೆಷ್ಟು ಪ್ರಖರವಾಗಿತ್ತು!
ಪ್ರಯತ್ನ ಪಡದೆ ಸಿಕ್ಕ ಯಶಸ್ಸು ಈ ಸ್ವಾತಂತ್ರ್ಯ  ಎಂದು ಸಂಕಟ ಪಡೋ ನಮ್ಮಂತೋರ ಮತ್ತು
ಉಪವಾಸ ಸತ್ಯಾಗ್ರಹಗಳೇ ನಮ್ಮ ಸ್ವಾತಂತ್ರ್ಯದ ಮೂಲ ಬಲವಾಗಿತ್ತು ಅನ್ನೋ ಭ್ರಮೆಯಲ್ಲಿ ಇರುವವರ ನಡುವೆ.
ನಿಜವಾಗಿ ಯುದ್ಧದಲ್ಲಿ ತನ್ನನು ತಾನು ತೊಡಗಿಸಿಕೊಂಡ ನೇತಾಜಿ, ನಿಜವಾದ ಮಹಾತ್ಮ.

ಅಂದು ನೀವೂ ಮರೆಯಾಗದೆ ಇದ್ದಿದ್ದರೆ 'ಸ್ವಾತಂತ್ರ್ಯದ  ಸೂರ್ಯ' ಭಾರತದ ಬಾನಿನಂಗಳದಲ್ಲಿ ಇನ್ನಷ್ಟು ಮೊದಲೆ ಉದಯಿಸುತ್ತಿದ್ದ. ಏಕೆಂದರೆ ನೀವೂ ಸುಭಾಷ್ 'ಚಂದ್ರ'ನೆ ಆದರೂ ಭಾರತದ ಸ್ವಾತಂತ್ರ್ಯ ಹೋರಾಟದ ಅಂಗಳದಲ್ಲಿ ಪ್ರಜ್ವಲಿಸಿದ ಪ್ರಖರ ಸೂರ್ಯ. ನಮ್ಮ ದೇಶಕ್ಕೊಂದು ಮೊದಲ  ಸ್ವತಂತ್ರ ಸೇನೆ ಕಟ್ಟಿ 'ಜೈಹಿಂದ್' ಘೋಷ ಮೊಳಗಿಸಿ ನೀವೂ ಹೊರಟ ವೇಗಕ್ಕೆ ಆಂಗ್ಲರೇನು, ನಮ್ಮಲ್ಲೆ ಕೆಲವರು ಅದುರಿ ಬಿದ್ದಿದ್ದರು. ಇವತ್ತಿಗು ಆ ಜಯ ಘೋಷ ದಿನನಿತ್ಯ ಮೊಳಗುತ್ತದೆ ದೇಶದಲ್ಲಿ. ಮರೆಯಾದ ಸೂರ್ಯ ಮತ್ತೆ ಮರಳಿಯಾನು ಎಂದು ನಮ್ಮ ಜನ ನಿಮಗಾಗಿ ಕಾದಷ್ಟು ಮತ್ಯಾವ ನಾಯಕರಿಗು ಕಾಯಲಿಲ್ಲ..! ನಿಮ್ಮ ಸಾಹಸಗಾಥೆ ಇಂದಿಗೂ ಯುವಜನಮನಕೆ ಸ್ಪೂರ್ತಿ, ಶಕ್ತಿ.  ಏಕೆಂದರೆ ಮಹಾನ್ ನಾಯಕರು  ಬಹಳಷ್ಟು ಮಂದಿಯಿದ್ದರು ಇಡೀ ದೇಶಕ್ಕೆ 
ನೇತಾಜಿಯಾಗಿ ಕಂಡಿದ್ದು ನೀವೊಬ್ಬರೆ.


ಸಮರಸೇನಾನಿಯ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ಗೌರವಪೂರ್ಣ ನಮನಗಳು 🙏
ಹಾಗೆ ಎಲ್ಲರಿಗೂ ಪರಾಕ್ರಮ ದಿನದ ಶುಭಾಶಯಗಳು...