ಕಾರ್ಗಿಲ್ ಯುದ್ಧದಲ್ಲಿ ನಮ್ಮ ದೇಶದ ವೀರ ಯೋಧರ ಯಶೋಗಾಥೆ!!





ಇಂದು (26th July) ಕಾರ್ಗಿಲ್ ವಿಜಯ ದಿವಸ - 'ಆಪರೇಷನ್ ವಿಜಯ್'ನ 22ನೇ ವಾರ್ಷಿಕೋತ್ಸವ, ಪಾಪಿ ಪಾಕಿಸ್ತಾನದ ಮೇಲೆ 1999ರಲ್ಲಿ ಭಾರತ ದಿಗ್ವಿಜಯ ಸಾಧಿಸಿದ ಸವಿನೆನಪಿಗಾಗಿ ಜುಲೈ 26ರಂದು ಪ್ರತಿವರ್ಷ 'ಕಾರ್ಗಿಲ್ ವಿಜಯ ದಿವಸ'ವನ್ನು ಆಚರಿಸಲಾಗುತ್ತಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕಾರ್ಗಿಲ್ ವೀರ ಯೋಧರಿಗೆ ನಮ್ಮ ಕೋಟಿ ನಮನ... 
ಸೈನಿಕರೇ ನಿಮಗೊಂದು ದೊಡ್ಡ ಸಲಾಂ...!

ನಮ್ಮ ದೇಶದ ಜನರು ಸಿನಿಮಾದಲ್ಲಿ ಯುದ್ಧ ಮಾಡೊ ಹೀರೋಗಳ ಬಗ್ಗೆ ತೋರುವ ಕಾಳಜಿ, ಪ್ರೀತಿಯನ್ನು ನಿಜವಾಗಿಯೂ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ದೇಶ ಕಾಯೋ ಯೋಧರ ಬಗ್ಗೆ ತೋರಿಸಿದ್ದರೆ ನಮ್ಮ ಯೋಧರಿಗೆ ಸೆಲೆಬ್ರಿಟಿ ಸ್ಥಾನ ಸಿಕ್ಕಿಬಿಡುತ್ತಿತ್ತೆನೊ...!! 
ಹೌದು. ಕಾರ್ಗಿಲ್ ಯುದ್ಧದ ಬಗ್ಗೆ ಎಷ್ಟೋ ಜನಕ್ಕೆ ಈಗಲೂ ಸಹ ಗೊತ್ತೇ ಇಲ್ಲ, ಭಾರತದ ನಾಗರಿಕರಾಗಿ ಕಾರ್ಗಿಲ್ ಬಗ್ಗೆ ತಿಳಿಯುವುದು ನಮ್ಮ ಕರ್ತವ್ಯ ಕೂಡ...



ಇಂದು ಜಗತ್ತು ಬರಿ ಸ್ವಾರ್ಥಮಯವಾಗಿಬಿಟ್ಟಿದೆ. ತಾನೂ ನನ್ನ ಕುಟುಂಬ ಚೆನ್ನಾಗಿದ್ದರೆ ಸಾಕು ಬೇರೆಯವರ ಉಸಾಬರಿ ನಮಗ್ಯಾಕೆ? ಎನ್ನುವ ಭಾವನೆ ಜನರಲ್ಲಿ ತುಂಬಿಹೋಗಿದೆ.  ನಾನು ಮತ್ತು ನನ್ನ ಕುಟುಂಬ ಕ್ಷೇಮವಾಗಿದೆ ನಾನ್ಯಾಕೆ ಬೇರೆ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕು? ಅದರಿಂದ ನನಗೇನು ಲಾಭ? ಹೀಗೆ ಲಾಭ- ನಷ್ಟಗಳ ಲೆಕ್ಕಾಚಾರ ಮಾಡುತ್ತದೆ ಮನುಷ್ಯನ ಮನಸ್ಸು. ನಮ್ಮ ಈ ಸುಖ ಸಂತೋಷಗಳ ಹಿಂದೆ ಕಾಣದ ಕೈಗಳು ಅವಿರತವಾಗಿ ದುಡಿಯುತ್ತಿವೆ ಅವರಿಗೆ ನಾವು ಋಣಿಯಾಗಿರಬೇಕು ಎಂಬ ಕೃತಜ್ಞತಾ ಮನೋಭಾವ ಬಿಡಿ, ಆ ಕುರಿತು ಯೋಚನೆಯನ್ನು ಸಹ ನಾವು ಮಾಡುವುದಿಲ್ಲ.
ಬರಿ ನಮ್ಮ  ಜೀವನದ ಬಗ್ಗೆ ಕಾಳಜಿ ವಹಿಸುವ ನಾವು, ಕಾಶ್ಮೀರದ ತುದಿಯಲ್ಲಿ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ನಮ್ಮನ್ನು ಶತ್ರುಗಳಿಂದ ಕಾಪಾಡುವ ಯೋಧನ  ಜೀವನದ ಬಗ್ಗೆ ಯೋಚಿಸುತ್ತೆವೆಯೇ ? 
ತನ್ನ ಸ್ವಾರ್ಥಗಳನ್ನು ಮರೆತು ದೇಶ ಕಾರ್ಯದಲ್ಲಿ ಮಗ್ನನಾಗಿ; ಚಳಿ, ಗಾಳಿ, ಮಳೆಗಳನ್ನು ಲೆಕ್ಕಿಸದೆ ಆ ವೀರ ಯೋಧ ನಮ್ಮ ರಕ್ಷಣೆ ಮಾಡುತ್ತಿರುತ್ತಾನೆ. ನಮ್ಮ ಕಷ್ಟ ಕಾರ್ಪಣ್ಯಗಳ ಬಗ್ಗೆಯೇ ಎಂದಿಗೂ ಚಿಂತಿಸುವ ನಾವು, ನಮ್ಮ ರಕ್ಷಕರಾದ ಯೋಧರ ದುಃಖ ದುಮ್ಮಾನಗಳ ಬಗ್ಗೆ ಚಿಂತಿಸುವುದೇ ಇಲ್ಲ.

ಭಾರತದ ತುದಿಯಲ್ಲಿ ಸಿಯಾಚಿನ್ ಎಂಬ ಪ್ರದೇಶವಿದೆ. ಅಲ್ಲಿನ ಉಷ್ಣಾಂಶ  -50 ಡಿಗ್ರಿ ಸೆಲ್ಸಿಯಸ್.  ಅಂದರೆ ಕಲ್ಪನೆ ಮಾಡಲಾಗದಷ್ಟು ಭಯಂಕರ ಚಳಿ ಇರುತ್ತದೆ. ಎಷ್ಟೆಂದರೆ ಮೂತ್ರ ಮಾಡಲು ಮುಂದಾದರೆ ಮೂತ್ರ ನೆಲವನ್ನು ತಾಕುವ ಮೊದಲೇ ಮಂಜುಗಡ್ಡೆಯಾಗುವಷ್ಟು! ಇಂತಹ ಪ್ರದೇಶಗಳಲ್ಲಿಯೂ ಹೊಂದಿಕೊಂಡು ನಮ್ಮ ಯೋಧರು ದೇಶದ ಗಡಿ ರಕ್ಷಣೆ ಮಾಡುತ್ತಾರೆ. ಯೋಧರಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯ, ಉತ್ತಮ ವೇತನವಿದೆ ಹಾಗಾಗಿ ಅವರು ಸಂಬಳಕ್ಕಾಗಿ ದುಡಿಯುತ್ತಾರೆ,  ದೇಶಕ್ಕಾಗಿ ಅಲ್ಲ ಎಂದು ಕೆಲವರು ಉಡಾಫೆಯ ಉತ್ತರವನ್ನು ನೀಡುತ್ತಾರೆ.   ಸಂಬಳಕ್ಕಾಗಿ , ಹಣಕ್ಕಾಗಿ ಸೇನೆಗೆ ಸೇರಬೇಕೆಂದೇನೂ ಇಲ್ಲ, ಇಂದಿನ ಯುಗದಲ್ಲಿ ಹಣ ಗಳಿಸಲು ಸಾವಿರಾರು ಮಾರ್ಗಗಳಿವೆ. ಹಣಕ್ಕೆ ಹಾತೊರೆಯುವವರು ಅವರಾಗಿದಿದ್ದರೆ  ತಮ್ಮ ಕರ್ತವ್ಯವನ್ನು ಮರೆತು ಮನೆಸೇರಿ ಬಿಡುತ್ತಿದ್ದರು. ಅವರು ತಮ್ಮ  ಕರ್ತವ್ಯವನ್ನು  ಮರೆತು ನಮ್ಮ ನ್ನು ಕಾಯದೇ ಇದ್ದರೆ ನಮ್ಮ ಪರಿಸ್ಥಿತಿ ಒಮ್ಮೆ ಊಹಿಸಿಕೊಳ್ಳಿ.  ನಿಜಕ್ಕೂ ಆ ವೀರ ಯೋಧರಿಂದಲೇ ನಾವು ಸುಖವಾಗಿರೋದು. ನಮ್ಮನ್ನು ಸುಖವಾಗಿರಿಸಲು ಅಸಂಖ್ಯ ಯೋಧರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ತ್ಯಾಗ, ಬಲಿದಾನಗಳನ್ನು ನಾವು ಗೌರವಿಸದಿದ್ದರೆ ಹೇಗೆ?

ಭಾರತ ಎದುರಿಸಿದ ಯುದ್ದಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಕಾದಾಡಿದ ಕಾರ್ಗಿಲ್ ಯುದ್ದವೇ ದೊಡ್ಡ ಯುದ್ದವೆನ್ನಬಹುದು. ನಮ್ಮ ಸೈನಿಕರ ಕೆಚ್ಚೆದೆಯ ಹೋರಾಟ, ಸಾಹಸಗಳಿಂದ ಭಾರತ ಈ ಯುದ್ದದಲ್ಲಿ ಜಯಭೇರಿ ಬಾರಿಸಿತು. ನಿಯಮಗಳನ್ನು ಗಾಳಿಗೆ ತೂರಿ 1999ರಲ್ಲಿ ಪಾಪಿ ಪಾಕಿಸ್ತಾನ ನಮ್ಮ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತೀಯ ನೆಲೆಗಳಿಗೆ  ತನ್ನ ಸೈನ್ಯ ಮತ್ತು ಕಾಶ್ಮೀರಿ ಉಗ್ರರನ್ನು ನುಸಳಿಸಿತು. ಇದೇ ಯುದ್ದದ ಕಾರಣ. ಕ್ಕಾಶ್ಮೀರಿ ಉಗ್ರಗಾಮಿಗಳು ಮತ್ತು ಪಾಕ್ ಸೈನಿಕರು ನಮ್ಮ  ಹಲವು ಭಾರತೀಯ ನೆಲೆಗಳನ್ನು ಆಕ್ರಮಿಸಿಕೊಂಡರು. ಈ ನೆಲೆಗಳನ್ನು ಮರುವಶ ಪಡೆದು ಕೊಳ್ಳಲು ಕಾರ್ಗಿಲ್ ಜಿಲ್ಲೆ ಮತ್ತು ಗಡಿ ಪ್ರದೇಶಗಳಲ್ಲಿ 1999ರ ಮೇ ಮತ್ತು ಜುಲೈ ನಡುವೆ ನಡೆದ ರೋಚಕ ಯುದ್ದವೇ ಕಾರ್ಗಿಲ್ ಯುದ್ದ.

ಪಾಕಿಸ್ತಾನ ಆಕ್ರಮಿಸಿಕೊಂಡಿದ್ದ ನೆಲೆಗಳನ್ನು  ಮರು ವಶಪಡೆದುಕೊಳ್ಳಲು   ಭಾರತೀಯ ಭೂ ಸೇನೆ ಮತ್ತು ವಾಯುಪಡೆಗಳು ಕಾರ್ಯಚರಣೆ ನಡೆಸಿತು. ಕಾರ್ಯಾಚರಣೆಯಿಂದ ಭಾರತ ಬಹುಪಾಲು ತನ್ನ ನೆಲೆಗಳನ್ನು ಮರು ವಶಪಡಿಸಿಕೊಂಡಿತು. ಸುಮಾರು 527ಕ್ಕೂ ಹೆಚ್ಚು ಯೋಧರು ಕಾಳಗದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದರು. 1363 ಕ್ಕೂ ಹೆಚ್ಚು ಭಾರತೀಯ ಯೋಧರು ಗಾಯಗೊಂಡರು.  ಕ್ಯಾಪ್ಟನ್ ವಿಕ್ರಂ ಭಾತ್ರ, ಗೋರ್ಖಾ ರೈಫಲ್ಸ್ ನ ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಕ್ಯಾಪ್ಟನ್ ಅನೂಜ್ ನಯ್ಯರ್, ಸರವಣನ್, ರಾಜೇಶ್ ಅಧಿಕಾರಿ ಮುಂತಾದ  ಸೇನಾಧಿಕಾರಿಗಳು ಬಲಿದಾನ ಮಾಡಿದರು.

ಕಾರ್ಗಿಲ್ ಯುದ್ದವೆಂದರೆ  ‘ಶೇರ್ ಷಾ’ ವಿಕ್ರಂ ಭಾತ್ರನನ್ನು  ನೆನೆಯಲೇ ಬೇಕು. ಪಾಕಿಸ್ತಾನ ಆಕ್ರಮಿಸಿದ್ದ ನೆಲೆಯನ್ನು ಮರುವಶಪಡಿಸಿಕೊಳ್ಳಲು ತನ್ನ 5 ಜನ ತಂಡದೊಂದಿಗೆ ಹೊರಟ ‘ಶೇರ್ ಷಾ’ ಒಬ್ಬನೇ ಏಕಾಂಗಿಯಾಗಿ ದಾಳಿ ನಡೆಸಿ  ಐದು ಪಾಕ್ ಸೈನಿಕರನ್ನು ಕೊಂದರು.  ಇದರಿಂದ ಸ್ಪೂರ್ತಿಗೊಂಡ  ವಿಕ್ರಂ ಭಾತ್ರ ತಂಡ ದಾಳಿ ನಡೆಸಿ, ಪಾಯಿಂಟ್ 5140 ವಶಪಡಿಸಿಕೊಂಡರು. ಯಶಸ್ವಿ ಕಾರ್ಯಾಚರಣೆಯ ಧೀರ ವಿಕ್ರಮ್ ಭಾತ್ರ “ ಹೇ ದಿಲ್ ಮಾಂಗೇ ಮೋರ್” ಎಂಬ ಘೋಷಣೆ ಕೂಗಿದರು. ಅಷ್ಟೊಂದು ಪ್ರಖರತೆಯಿಂದ ಕೂಡಿತ್ತು ಆತನ ದೇಶಭಕ್ತಿ. ಭಾರತ ತನ್ನ ನೆಲೆಯನ್ನು ವಶಕ್ಕೆ ಪಡೆದುಕೊಂಡಿತು ಆದರೆ “ ಶೇರ್ ಷಾ” ಹುತಾತ್ಮರಾದರು. ಕಾರ್ಯಾಚರಣೆಯಲ್ಲಿ ತೀವ್ರವಾಗಿ ಗಾಯಗೊಂಡ ವಿಕ್ರಂ ಭಾತ್ರ ಮರಣಹೊಂದಿದರು.

ಜುಲೈ ತಿಂಗಳು ಬಂದಾಗ  ಕಾರ್ಗಿಲ್ ಯುದ್ದ ಮತ್ತು ಕ್ಯಾಪ್ಟನ್ ಭಾತ್ರ ನಮಗೆ ನೆನಪಾಗಬೇಕು. ಜುಲೈ 26 1999 ರಂದು ಭಾರತ ಮತ್ತು ಪಾಕಿಸ್ತಾನದ ಕಾರ್ಗಿಲ್ ಯುದ್ದ ಅಂತ್ಯವಾಯಿತು. ಪಾಕಿಸ್ತಾನ ಆಕ್ರಮಿಸಿದ್ದ ಎಲ್ಲ ಭಾರತೀಯ ನೆಲೆಗಳನ್ನು ಭಾರತ ಮರುವಶಕ್ಕೆ ತೆಗೆದುಕೊಂಡಿತು. ಜುಲೈ 26 ರನ್ನು ಕಾರ್ಗಿಲ್ ವಿಜಯ ದಿವಸ್ ಎಂದು ಆಚರಿಸಲಾಗುತ್ತದೆ. ಯುದ್ದದಲ್ಲಿ ಮಡಿದ ಅಸಂಖ್ಯ ಯೋಧರನ್ನು ಸ್ಮರಣೆ ಮಾಡಲಾಗುತ್ತದೆ.

ಆ ಯೋಧರ ಬಲಿದಾನಗಳಿಂದಲೇ ನಾವು ಇಂದು ಸುಖವಾಗಿದ್ದೇವೆ. ಅವರು ಅಲ್ಲಿ ನೆತ್ತರು ಹರಿಸಿ ನಮ್ಮನ್ನು ರಕ್ಷಣೆ ಮಾಡಿದ ಪರಿಣಾಮ ನಾವಿಲ್ಲಿ  ಸುರಕ್ಷಿತರಾಗಿದ್ದೇವೆ. ಅವರನ್ನು ನೆನೆಯುವುದು ಎಲ್ಲ ಭಾರತೀಯ ಪ್ರಜೆಗಳ ಕರ್ತವ್ಯ.  2021ಕ್ಕೆ ಕಾರ್ಗಿಲ್ ಯುದ್ದ ಮುಗಿದು 22 ವರ್ಷಗಳಾಗುತ್ತದೆ. ಆ ವೀರ ಸೇನಾನಿಗಳನ್ನು ನೆನೆಯೋಣ, ಅವರ ತ್ಯಾಗ ಬಲಿದಾನಗಳಿಗೆ ನಾವು ಋಣಿಯಾಗಿರೋಣ.

ವೀರ್ ಜವಾನ್ ಅಮರ್ ರಹೇ

ಜೈ ಹಿಂದ್🙏