ವಿದ್ಯಾರ್ಥಿಗಳ ಭವಿಷ್ಯವನ್ನು ಮಾರಕಗೊಳಿಸುತ್ತಿರುವ ಡ್ರಗ್ಸ್ ಎಂಬ ಮಾದಕ ವ್ಯಸನಗಳಿಗೆ ಬಲಿಯಾಗುವ ಮುನ್ನ ಹೆತ್ತವರು ಮತ್ತು ಸರಕಾರ ಎಚ್ಚೆತ್ತುಕೊಳ್ಳಬೇಕು

"ಇಂದಿನ ಮಕ್ಕಳೇ ನಾಳಿನ ಪ್ರಜೆಗಳು" , 
"ಇಂದಿನ ಯುವಕರೇ ನಾಳಿನ ನಾಗರಿಕರು" ಎನ್ನುವ ಮಾತು ಸತ್ಯ.. 


ಈ ಜನಾಂಗದ  ಮಕ್ಕಳು ಎಳೆಯ ವಯಸ್ಸಿಗೆ ಡ್ರಗ್ಸ್ ಚಟಕ್ಕೆ ಮಾರು ಹೋಗಿರುತ್ತಾರೆ. ಡ್ರಗ್ಸ್ ಅಂತಹ ಮಾದಕ ವಸ್ತುಗಳು ಆರೋಗ್ಯಕ್ಕೆ ಹಾನಿಕರ ಎಂದು ತಿಳಿದೂ ವ್ಯಸನಿಗಳು ಅದರ ಚಟಕ್ಕೆ ಮಾರು ಹೋಗಿತಿದ್ದಾರೆ.. ಆದರೆ ಇದಕ್ಕೆ ಹೆಚ್ಚು ಬಲಿಯಾಗುವುದು ಹದಿಹರೆಯದ ಮಕ್ಕಳು ಮುಂದೆ ಅತೀ ದೊಡ್ಡ ಭವಿಷ್ಯವನ್ನು ಇಟ್ಟುಕೊಂಡು ಆರೋಗ್ಯಕರವಾಗಿ ಬೆಳೆಯಬೇಕಾದ ಈ ಯುವ ಜನಾಂಗದ ಮಕ್ಕಳು ತಮ್ಮ ಆರೋಗ್ಯವನ್ನು ಬೆಳೆಯಬೇಕಾದ ಹರೆಯದಲ್ಲೇ ಹಾಳು ಮಾಡುಕೊಳ್ಳುತ್ತಾ, ಜೊತೆಗೆ ಇಂತಹ ಕೆಟ್ಟ ಚಟಗಳಿಗೆ ಅಂಟಿಕೊಂಡಿರುವುದು ವಿಷಾದಕರ ಸಂಗತಿ.

ಹೈಸ್ಕೂಲ್ ಹಂತದಲ್ಲೇ ಮಾದಕ ವ್ಯವಸನಗಳಿಗೆ ಬಲಿಯಾಗಿ ಅದರಿಂದ ಹೊರ ಬರಲಾಗದೆ ಜೀವನವನ್ನೇ ಅಂತ್ಯಗೊಳಿಸಿದ ಎಷ್ಟೋ ವಿದ್ಯಾರ್ಥಿಗಳ ಉದಾಹರಣೆ ನಮ್ಮ ಮುಂದೆ ಇದೆ. ಶಾಲಾ ಕಾಲೇಜುಗಳ ಮಕ್ಕಳನ್ನು ಈ ವ್ಯಸನಕ್ಕೆ ದೂಡಿ ಹಣಮಾಡುವ ದೊಡ್ಡ ಮಾಫಿಯಾವೇ ಇದೆ. ಮೊದಮೊದಲು ಆಸಕ್ತಿಗಾಗಿ ಡ್ರಗ್ಸ್ ಸೇವನೆ ಮಾಡುವ ಮಕ್ಕಳು ಬರುಬರುತ್ತಾ ಅದಕ್ಕೆ ಅಂಟಿಕೊಂಡು ಬಿಡುತ್ತಾರೆ. ಸರಿಯಾದ ಸಮಯದಲ್ಲಿ ಇಂತಹ ಮಕ್ಕಳಿಗೆ ಪೋಷಕರ, ಹಿರಿಯರ ನೆರವು ಸಿಗದೇ ಹೋದರೆ ಅವರ ಬದುಕು ನಾಶವಾಗಿ ಹೋಗುತ್ತದೆ.

ವಿದ್ಯಾರ್ಥಿಗಳು ನಮ್ಮ ದೇಶದ ಸಂಪತ್ತು. ನಮ್ಮ ದೇಶದ ಭವಿಷ್ಯ ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ವಿದ್ಯಾರ್ಥಿಗಳ ಕೈಯಲ್ಲಿದೆ. ಶಾಲಾ-ಕಾಲೇಜುಗಳ ಆವರಣಗಳಲ್ಲೇ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದ್ದು, ಅಮಲಿನ ನಶೆಯ ಪರಿಣಾಮವಾಗಿ ಹಲವಾರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿರುವ ಘಟನೆಗಳೂ ಆಗಾಗ ನಡೆಯುತ್ತಿದೆ. ಯುವಶಕ್ತಿ ದೇಶದ ಶಕ್ತಿಯಾಗಿದೆ. ನಾಡಿನ ಆಸ್ತಿಯಾದ ಈ ವಿದ್ಯಾರ್ಥಿಗಳನ್ನು ಸನ್ಮಾರ್ಗದೆಡೆಗೆ ಒಯ್ಯುವ ಗುರುತರ ಜವಾಬ್ದಾರಿ ತಂದೆ-ತಾಯಿ, ಶಿಕ್ಷಕರ, ಸಮಾಜದ, ಸರಕಾರದ ಮೇಲಿದೆ.

ತನ್ನ ಮಗ ಅಥವಾ ಮಗಳು ಇಂತಹ ಚಟದ ವ್ಯಸನಿಗಳಾಗಿರಲು ಸಾಧ್ಯವೇ ಇಲ್ಲ ಎಂಬ ಅತಿಯಾದ ನಂಬಿಕೆ ತಂದೆ-ತಾಯಿಯರದು. ತನ್ನ ಮಗ ಅಥವಾ ಮಗಳು ಹೈಸ್ಕೂಲ್ ವ್ಯಾಸಂಗ ಮಾಡುತ್ತಿದ್ದಾರೆ ಎಂದ ತಕ್ಷಣ ಅವರ ಮೇಲೆ ಸ್ವಲ್ಪ ನಿಗಾ ಇಡಬೇಕು. ಏಕೆಂದರೆ ಆ ವಯಸ್ಸೇ ಅಂಥದ್ದು. ಹಾದಿ ತಪ್ಪುವುದು ತಪ್ಪಿಸುವವರು ಇರುವುದು ಸರ್ವೇ ಸಾಮಾನ್ಯ. ಹಾಗಾಗಿ ಮಕ್ಕಳೂ ಕೂಡ ಅಷ್ಟೇ ಜಾಗರೂಕರಾಗಿರಬೇಕು. ಸಾಧ್ಯವಾದಲ್ಲಿ ಮಕ್ಕಳಿಗೆ ತಿಳಿ ಹೇಳಬೇಕು. ಮಕ್ಕಳೊಂದಿಗೆ ಗೆಳೆಯ ಅಥವಾ ಗೆಳತಿಯ ತರಹದ ಬಾಂಧವ್ಯ ಬೆಳೆಸಿಕೊಂಡರೆ, ಅವರೂ ಕೂಡ ಅವರ ತೊಂದರೆಗಳನ್ನು ಭಯವಿಲ್ಲದೆ ಹೇಳಿಕೊಳ್ಳುತ್ತಾರೆ. ಹೀಗಾದರೂ ಸ್ವಲ್ಪ ಮಟ್ಟಿಗೆ ಮಕ್ಕಳು ಮಾದಕ ದ್ರವ್ಯದ ವ್ಯಸನಿಗಳಾಗದಂತೆ ತಡೆಯಬಹುದು.

ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಮಾದಕ ವ್ಯಸನ ಒಂದು ಅನಿಷ್ಟದಂತೆ ಹಬ್ಬುತ್ತಿದೆ. ಹೆಚ್ಚು ಹೆಚ್ಚು ಯುವಜನತೆ, ಅದರಲ್ಲೂ ಹದಿಹರೆಯದ ಪ್ರಾಯದಲ್ಲೇ ಇದಕ್ಕೆ ದಾಸರಾಗುತ್ತಿದ್ದಾರೆ. ಅತ್ಯಂತ ನಿಗೂಢವಾಗಿ ನಡೆಯುತ್ತಿದ್ದ ಇದರ ಕಳ್ಳದಂಧೆಗಳು ಇತ್ತೀಚಿನ ದಿನಗಳಲ್ಲಿ ಎಗ್ಗಿಲ್ಲದಂತೆ ನಡೆಯುತ್ತಿರುವುದು ಅಪಾಯದ ಮುನ್ಸೂಚನೆ ನೀಡಿದೆ. ಕಾನೂನು, ಪೊಲೀಸ್ ವ್ಯವಸ್ಥೆ ದುರ್ಬಲವಾಗಿರುವುದೇ ಇದಕ್ಕೆ ಮುಖ್ಯ ಕಾರಣ.

ಗಂಭೀರ ಸಮಸ್ಯೆಯನ್ನು ಲಘುವಾಗಿ ಪರಿಗಣಿಸದೆ ಅದರ ವಿರುದ್ಧ ಕಠಿಣ ಹೋರಾಟವನ್ನು ಆರಂಭಿಸಿ, ಕ್ರಮಕೈಗೊಳ್ಳಬೇಕಾದ ಜವಾಬ್ದಾರಿ ಸರ್ಕಾರ ಮತ್ತು ನಾಗರಿಕರೆಲ್ಲರ ಮೇಲೂ ಇದೆ.