ತಂಬಾಕು ರಹಿತ ವಿಶ್ವ ಆಗಬಹುದೇ...?
ಇಂದು ವಿಶ್ವ ತಂಬಾಕು ರಹಿತ ದಿನ. ತಂಬಾಕು ಬಿಟ್ಟಾಕು ಎಂಬ ಘೋಷಣೆಗೆ ಬಲ ಇರುವ ದಿನ. 1987ರಿಂದಲೇ ವಿಶ್ವ ಆರೋಗ್ಯ ಸಂಸ್ಥೆ ಮೇ 31ನ್ನು ‘ತಂಬಾಕು ರಹಿತ ದಿನ’ವೆಂದು ಘೋಷಿಸಿ ತಂಬಾಕಿನ ವಿರುದ್ಧ ಜನಜಾಗೃತಿ ಮೂಡಿಸಲು ವ್ಯಾಪಕ ಪ್ರಯತ್ನ ಮಾಡುತ್ತಿದೆ. ಪ್ರತೀ ವರ್ಷ ತಂಬಾಕು ವಿರೋಧದ ಯಾವುದಾದರೊಂದು ಆಯಾಮವನ್ನು ಮುಖ್ಯ ಕಾರ್ಯ ಸೂಚಿಯಾಗಿಸಿಕೊಂಡು ವಿಶ್ವದೆಲ್ಲೆಡೆ ಎಚ್ಚರ ಮೂಡಿಸಲು ಪ್ರಯತ್ನಿಸುತ್ತಿದೆ..
ಬೀಡಿ ಸೇದಿದರೆ ಕ್ಯಾನ್ಸರ್ ಬರುತ್ತದೆಯಾ? ಎನ್ನುವ ಅನಕ್ಷರಸ್ಥ ದಿನಗೂಲಿ ಕಾರ್ಮಿಕನಿಗೂ, ಒಂದು ಧಮ್ ಎಳೆಯದಿದ್ದರೆ ಬದುಕಿ ಏನು ಪ್ರಯೋಜನ ಎನ್ನುವ ಅಕ್ಷರಸ್ಥ ಧೂಮಪಾನಿಗೂ ಬುದ್ಧಿ ಹೇಳಬೇಕಾದ ದಿನ. ತುದಿಯಲ್ಲಿ ತೂಗಾಡುವ ಬೂದಿಯಲ್ಲಿ ಉರಿದು ಬೀಳಲಿರುವ ಜೀವವನ್ನು ಲಕ್ಷಿಸದೇ, ತನ್ನ ಸುತ್ತಲಿನ ಜಗತ್ತನ್ನೂ ದಹಿಸಿಬಿಡುವ ಮನುಷ್ಯನಿಗೆ ವಿವೇಚನೆಯ ಪಾಠ ಹೇಳಬೇಕಾದ ದಿನ.
ಇತ್ತೀಚಿನ ದಿನಗಳಲ್ಲಿ ಧೂಮಪಾನ ಮಾಡುವುದು 'ಫ್ಯಾಶನ್' ಆಗಿ ಬೆಳೆದಿದೆ. ಇದರಲ್ಲಿ ಯವತಿಯರ ಸಂಖ್ಯೆಯು ಗಣನೀಯ ಹೆಚ್ಚಳವಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಪ್ರಸಕ್ತ ಭಾರತದಲ್ಲಿ 22 ಕೋಟಿ ತಂಬಾಕು ಬಳಕೆದಾರರಿದ್ದಾರೆ. ಅವರಲ್ಲಿ ಏಳು ಕೋಟಿ ಮಹಿಳೆಯರಾದರೆ, 15 ಕೋಟಿ ಪುರುಷರು. ಅಂದಾಜು 2,500 ಮಂದಿ ಪ್ರತಿದಿನ ತಂಬಾಕು ಸೇವನೆಯಿಂದಾಗಿ ಸಾವನ್ನಪ್ಪುತ್ತಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಾದ್ಯಂತ ಪ್ರತಿವರ್ಷ 60 ಲಕ್ಷ ಮಂದಿ ಧೂಮಪಾನದಿಂದ ಸಾವಿಗೀಡಾಗುತ್ತಿದ್ದಾರೆ. ಆತಂಕಕಾರಿ ಸಂಗತಿಯೆಂದರೆ ಇವರಲ್ಲಿ ಆರು ಲಕ್ಷಕ್ಕೂ ಹೆಚ್ಚು ಮಂದಿ ಸಕ್ರಿಯ ಧೂಮಪಾನಿಗಳಲ್ಲ. ತಾವು ನೇರವಾಗಿ ಧೂಮಪಾನಿಗಳಲ್ಲದಿದ್ದರೂ ಬೇರೆಯವರು ಸಿಗರೇಟ್ ಸೇದುವಾಗ ಆ ಪರಿಸರದಲ್ಲಿ ಇದ್ದ ಕಾರಣದಿಂದಾಗಿ ಮಾರಕ ಕಾಯಿಲೆಗಳಿಗೆ ತುತ್ತಾಗಿ ಪ್ರಾಣ ಕಳಕೊಂಡಿದ್ದಾರೆ. ಇನ್ನೊಂದು ಆತಂಕದ ವಿಷಯವೆಂದರೆ ಜಗತ್ತಿನ ಒಟ್ಟಾರೆ ಧೂಮಪಾನಿಗಳ ಪೈಕಿ ಶೇ. 12ರಷ್ಟು ಮಂದಿ (ಸುಮಾರು 12 ಕೋಟಿ) ಭಾರತದಲ್ಲೇ ಇದ್ದಾರೆ.. ತಂಬಾಕು ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪುವವರ ಪೈಕಿ ಶೇಕಡ 80 ರಷ್ಟು ಮಂದಿ ಗ್ರಾಮೀಣ ಭಾಗದವರು ಎಂಬುದು ಆಘಾತಕಾರಿ ಸಂಗತಿ.
ಯುವ ಸಮುದಾಯ ಒಂದು ಮಾತು ನೆನಪಿಡಬೇಕು. ಧೂಮಪಾನ ಸೇರಿದಂತೆ ತಂಬಾಕು ಸೇವನೆಯಿಂದ ಶ್ವಾಸಕೋಶ ಹಾಗೂ ಹೃದ್ರೋಗ ಸಂಬಂಧಿ ಕಾಯಿಲೆಗಳು ಮಾತ್ರವಲ್ಲದೆ, ಇದು ಪುರುಷರದಲ್ಲಿ ನರದೌರ್ಬಲ್ಯ, ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್ ಮೊದಲಾದವುಗಳಿಗೆ ದಾರಿ ಮಾಡಕೊಡುತ್ತದೆ. ಹರೆಯದಲ್ಲಿ ಮೋಜಿಗಾಗಿ ಬರಮಾಡಿಕೊಳ್ಳುವ ಈ ಹವ್ಯಾಸ ಚಟವಾಗಿ ಕುಟುಂಬ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಧೂಮಪಾನವಷ್ಟೇ ಅಪಾಯಕಾರಿಯಲ್ಲ. ಬೋರೊಬ್ಬರು ಸೇದಿ ಬಿಡುವ ಹೊಗೆ ಕುಡಿಯುವುದೂ ಅಪಾಯಕಾರಿ. ಸಿಗರೇಟ್ ಸೇವನೆಯಿಂದ ಅನೇಕ ಅಪಾಯಕಾರಿ ರಾಸಾಯನಿಕ ವಸ್ತುಗಳು ಉತ್ಪತ್ತಿಯಾಗುತ್ತವೆ. ಇದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಯುವ ಸಮುದಾಯ ತಂಬಾಕು ಸೇವನೆ ಚಟಕ್ಕೆ ಬಲಿಯಾಗದಂತೆ ಪೋಷಕರು ಮತ್ತು ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ಅದರಿಂದಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾನೂನು ಜಾರಿಯಲ್ಲಿದೆ. ಆದರೆ ಈ ಕಾನೂನು ಪರಿಣಾಮಕಾರಿಯಾಗಿಲ್ಲ. ಆದರೂ ಕಾನೂನಿನ ಮೂಲಕ ನಿಯಂತ್ರಣ ಮಾಡುವುದು ಸಾಧ್ಯವೇ ಇಲ್ಲ.
ಕೇವಲ ಕಾನೂನುಗಳಿಂದಲೇ ಸಮಾಜ ಸುಧಾರಣೆಯಾಗದು ಎಂಬುದಕ್ಕೆ ದೊಡ್ಡ ನಿದರ್ಶನ.
ಸಾರ್ವಜನಿಕ ಸ್ಥಳಗಳಲ್ಲಿ ಎಷ್ಟರಮಟ್ಟಿಗೆ ಧೂಮಪಾನ ನಿಷೇಧ ಜಾರಿಯಾಗಿದೆ ಎಂದು ಯೋಚಿಸಿದರೆ ಸಾಕು, ಅರ್ಥವಾಗುತ್ತದೆ. ನೀವು ಯಾವುದೇ ಟೀ ಸ್ಟಾಲ್‍ಗೆ ಭೇಟಿ ನೀಡಿ, ಅಲ್ಲಿ ಚಹಾಕ್ಕಿಂತಲೂ ಸಮೃದ್ಧವಾದ ಸಿಗರೇಟ್ ಹೊಗೆ ನಿಮಗೆ ಉಚಿತವಾಗಿ ಲಭ್ಯ. ಧೂಮಪಾನ ಬೇಡದ ಜನಸಾಮಾನ್ಯರು ಸಿಗರೇಟ್ ಅಡ್ಡೆಗಳಾಗಿರುವ ಇಂತಹ ಅಂಗಡಿಗಳಿಗೆ ಹೋಗವುದೇ ಕಷ್ಟ ಎಂಬಂತಹ ಪರಿಸ್ಥಿತಿ ಇದೆ. ವಿದ್ಯಾವಂತ ಮಂದಿಯೂ ಯಾವುದೇ ನಾಚಿಕೆ ಮರ್ಯಾದೆಯಿಲ್ಲದೆ, ನಾಗರಿಕತೆಯ ಕನಿಷ್ಠ ಲಕ್ಷಣವೂ ಇಲ್ಲದೆ ತಮ್ಮೆದುರು ನಿಂತ ಜನರ ಮುಖಕ್ಕೆ ಹೊಗೆಯುಗುಳುತ್ತಿರುತ್ತಾರೆ.
ಶಿಕ್ಷಣ ಸಂಸ್ಥೆಗಳ 200 ಮೀ. ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಿದ್ದರೂ ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. ಸಾಮಾನ್ಯವಾಗಿ ಸಿಗರೇಟ್, ಗುಟ್ಕಾದಂತಹ ತಂಬಾಕು ಉತ್ಪನ್ನಗಳ ಗೂಡಂಗಡಿಗಳು ಇರುವುದೂ ಕಾಲೇಜುಗಳ ಎದುರಲ್ಲೇ! ‘ಧೂಮಪಾನ ನಿಷೇಧಿಸಿದೆ. ಅದು ದಂಡನಾರ್ಹ ಅಪರಾಧ’ ಎಂಬ ಪೊಲೀಸರ ಬೋರ್ಡುಗಳನ್ನು ಅಂಗಡಿಯವರು ಅನಿವಾರ್ಯವಾಗಿ ಕಂಡೂಕಾಣಿಸದಂತೆ ತಗುಲಿಸುತ್ತಾರೆ; ಕೆಲವೊಮ್ಮೆ ಅದನ್ನು ಕಿತ್ತೆಸೆಯುವುದೂ ಇದೆ.
ಸ್ವಯಂ ಪ್ರೇರಣೆಯಿಲ್ಲದಿದ್ದರೆ, ಜಗತ್ತಿನ ಯಾವ ಕಾನೂನಿನಿಂದಲೂ ಧೂಮಪಾನವನ್ನು ನಿಲ್ಲಿಸಲು ಸಾಧ್ಯವಿಲ್ಲ. ಹಾಗೊಂದು ವೇಳೆ ಇಂತಹ ಕಾನೂನು ಹೇರಲು ಹೊರಟರೆ ಹೊಗೆಬತ್ತಿ ಆರಾಧಕರು ಹೆಚ್ಚಬಹುದೇ ಹೊರತು ಕಡಿಮೆಯಂತೂ ಆಗುವುದಿಲ್ಲ.
ಇಂದು ತಂಬಾಕು ರಹಿತ ವಿಶ್ವವನ್ನು ಮಾಡಲು ಯುವಕರು ಎದ್ದೇಳಬೇಕು. ತಂಬಾಕು ನಿಯಂತ್ರಣವೇನಿದ್ದರೂ ಯುವಕರಿಂದಲೇ ಆಗಬೇಕು ಎಂಬುದಂತೂ ಸತ್ಯ. ಆದುದರಿಂದ ಗೆಳೆಯರೇ, ಧೂಮಪಾನದ ಚಟವನ್ನು ಬಿಡೋಣ ಆರೋಗ್ಯಕರ ಸಮಾಜವನ್ನು ಕಟ್ಟುವಲ್ಲಿ ತೊಡಗೋಣ...
✍🏻 ಅನ್ವೇಶ್ ಕೇಕುಣ್ಣಾಯ