ಛಲದ ಬಲ

ಛಲದ ಬಲ

ಅದು ೧೯೮೯ರಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಟೆಸ್ಟ್ ಪಂದ್ಯ.

ವಕಾರ್ ಯೂನಿಸ್ ಮತ್ತಿತರ ಬೌಲರ್ ಗಳು ಉತ್ತುಂಗದಲ್ಲಿದ್ದ ಸಮಯ. ಭಾರತ ತಂಡದ ದಿಗ್ಗಜ ಬ್ಯಾಟ್ಸ್ಮೆನ್ ಗಳೆಲ್ಲ ಒಬ್ಬೊಬ್ಬರಾಗಿ ಔಟಾಗಿದ್ದರು. ಪಂದ್ಯ ಪಾಕ್ ಪರ ವಾಲುತಿತ್ತು. ಕ್ರಿಕೆಟ್ ತಜ್ಞರೆಲ್ಲ ಭಾರತ ಸೋಲುವುದು ಖಚಿತ ಎಂದು ಅದಾಗಲೇ ಭವಿಷ್ಯ ನುಡಿದಿದ್ದರು.

ಆಗಿನ ಸಮಯದಲ್ಲಿ ಫಾಸ್ಟ್ ಬೌಲರ್ ಗಳನ್ನ ಎದುರಿಸುವುದು ಹುಡುಗಾಟವೇನಾಗಿರಲಿಲ್ಲ. ಇದೇ ಸಮಯದಲ್ಲಿ ೧೬ ವರ್ಷದ ಒಬ್ಬ ಬಾಲಕ ಮೈದಾನಕಿಳ್ಳಿದ. ಮೊದಲ ಕೆಲವು ಎಸೆತಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ಯುವಕನಿಗೆ ಆಘಾತವೊಂದು ಕಾದಿತ್ತು. ಮರು ಎಸೆತ ಸರಿಯಾಗಿ ಯುವಕನ ಮೂಗಿಗೇ ಅತೀ ವೇಗದಿಂದ ತಗುಲಿಬಿಟ್ಟಿತು. ಕಣ್ಣು ಬಿಡುವಷ್ಟರಲ್ಲಿ ನಡೆದುಹೋದ ಈ ಘಟನೆಯಿಂದ ಹೊರಬರುವಷ್ಟರಲ್ಲಿಯೇ ಅದಾಗಲೇ ಯುವಕನ ಮೂಗಿನಿಂದ ಧಾರಾಕಾರವಾಗಿ ರಕ್ತ ಸುರಿಯಲಾರಂಭಿಸಿತು.

ಅವನು ಪಿಚ್ ಮೇಲೆಯೇ ಕುಸಿದು ಕುಳಿತಿದ್ದ. ಈ ದೃಶ್ಯವನ್ನು ನೋಡುತ್ತಿದ್ದವರೆಲ್ಲ ದಂಗಾಗಿ ಹೋಗಿದ್ದರು. ತಂಡದ ಫಿಸಿಷಿಯನ್ ಓಡೋಡುತ್ತ ಬಂದು ಪ್ರಥಮ ಚಿಕಿತ್ಸೆ ನೀಡಿ ರಕ್ತ ಹರಿಯದಂತೆ ಮಾಡಲು ಹರಸಾಹಸ ಪಡುತಿದ್ದ. ಪಂದ್ಯವನ್ನು ನೋಡುತಿದ್ದ ಹೆಂಗಸರಂತೂ ಇಂಥ ಕ್ರೀಡೆಯನ್ನು ನಿಷೇಧಿಸಬೇಕೆಂದು ಕೂಗಾಡತೊಡಗಿದ್ದರು. ೧೬ ವರ್ಷದ ಬಾಲಕನಿಗೆ ಸೂಕ್ತ ರಕ್ಷಣೆಯಿಲ್ಲದ ಇಂಥ ಕ್ರೀಡೆಗಳೇ ಇರಬಾರದೆಂದು ಜನರು ಸರ್ಕಾರವನ್ನು ದೂಷಿಸತೊಡಗಿದರು.

ಇನ್ನೊಂದು ತುದಿಯಲ್ಲಿದ್ದ ನವಜೋತ್ ಸಿಂಗ್ ಸಿಧು ಬಾಲಕನೆಡೆಗೆ ಧಾವಿಸಿದರು ಮತ್ತು ಆ ಬಾಲಕನಿಗೆ ಪೆವಿಲಿಯನ್ ಗೆ ಮರಳಿ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡತೊಡಗಿದರು. ಫಿಸಿಷಿಯನ್ ಕೂಡ ಆ ಬಾಲಕನನ್ನು ಕರೆದೊಯ್ಯಲು ಯೋಚಿಸತೊಡಗಿದರು. ಇನ್ನೇನು ಈ ವಿಕೆಟ್ ಕೂಡ ಹೋದ ಹಾಗೆ, ಕೆಳಗೆ ಬಿದ್ದ ಬಾಲಕ ಮತ್ತೆ ಮೇಲೇಳಲಾರ, ಭಾರತಕ್ಕೆ ಸೋಲೇ ಗತಿಯೆಂದು ಎಲ್ಲರು ಅಂದುಕೊಳ್ಳತೊಡಗಿದರು.

ಆದರೆ ಆ ಬಾಲಕನ ಯೋಚನೆಯೇ ಬೇರೆಯಾಗಿತ್ತು. ತನ್ನ ಕಾಲುಗಳ ಮೇಲೆ ಎದ್ದು ನಿಂತ ಆತ ತನ್ನ ಮರಾಠಿ ಮಿಶ್ರಿತ ಹಿಂದಿಯಲ್ಲಿ ಹೇಳಿದ್ದು ಎರಡೇ ಶಬ್ದಗಳನ್ನ - "ನಾನು ಆಡುತ್ತೀನಿ". ತನಗಾದ ಗಾಯದ ಮೇಲೆ ಅವನ ಗಮನವಿರಲಿಲ್ಲ, ಇಡೀ ಪ್ರಪಂಚವೇ ತನ್ನ ಬಗ್ಗೆ ಕನಿಕರ ಪಡುತ್ತಿರುವುದೂ ಆತನ ಅರಿವಿಗೇ ಬರಲಿಲ್ಲ. ಅವನ ಗಮನವಿದ್ದುದು ಒಂದರಲ್ಲೇ - ಭಾರತವನ್ನು ಹೇಗೆ ಸೋಲಿನಿಂದ ಪಾರು ಮಾಡಬೇಕೆನ್ನುವುದು.

ಕೊನೆಗೂ ಆತ ಸಿಧುವಿನೊಂದಿಗಿನ ಅಂದಿನ ಜೊತೆಯಾಟದಲ್ಲಿ ಭಾರತವನ್ನು ಸೋಲಿನಿಂದ ಮೇಲೆತ್ತಿ ಪಂದ್ಯ ಡ್ರಾ ಆಗುವಂತೆ ನೋಡಿಕೊಂಡ.

ಪರಿಸ್ಥಿತಿಗೆ ಶರಣಾಗಿ ಸುಲಭ ಪರಿಹಾರ ಕಂಡುಕೊಳ್ಳಬಹುದಾಗಿದ್ದರೂ ತನಗಾದ ನೋವನ್ನು ಲೆಕ್ಕಿಸದೆ ಎದೆಯೊಡ್ಡಿ ನಿಂತ ಆ ಬಾಲಕ ಇನ್ನಾರು ಅಲ್ಲ - ಕ್ರಿಕೆಟ್ ಜಗತ್ತು ಕಂಡ ಅದ್ಭುತ ದಂತ ಕಥೆ - *"ಸಚಿನ್ ತೆಂಡುಳ್ಕರ್ "*.