ನಮ್ಮೊಳಗೊಬ್ಬ ನಾಯಕ
ಇದರ ಬಗ್ಗೆ ಬರೆಯಬೇಕೆಂದು ನನಗೆ ಬಹಳ ದಿನಗಳಿಂದ ಅನಿಸಿತ್ತು. ಸಮಯದ ಅಭಾವದಿಂದ ಬರೆಯಲು ಆಗಿರಲಿಲ್ಲ. ಇವತ್ತು ಇದರ ಬಗ್ಗೆ ಬರೆಯಬೇಕೆಂದು ನಿಶ್ಚಯಿಸಿಯೇ ಕುಳಿತಿದ್ದೇನೆ...
ನಮಗೆಲ್ಲರಿಗೂ ಒಂದು ಕೆಟ್ಟ ಸ್ವಭಾವ ಇದೆ. ಅದೇನೆಂದರೆ ನಾವೇ ಮುಂದೆ ಬಂದು ನಾಯಕತ್ವ ವಹಿಸದಿರುವುದು. ಇದು ಎಂತಹ ಕೆಟ್ಟ ರೋಗವೆಂದರೆ, ನಾವು ಅದರಲ್ಲಿ ಮುಳುಗುವುದು ಎಷ್ಟು ಸುಲಭವೋ ಅದರಿಂದ ಹೊರ ಬರುವುದು ಅಷ್ಟೇ ಕಷ್ಟ.
*ನಾವೇಕೆ ಹೀಗೆ ?*
ನಾವು ಎಂದಿಗೂ, ಯಾವುದೇ ಕೆಲಸದಲ್ಲೂ ಮೊದಲು ಮುನ್ನುಗ್ಗುವುದಿಲ್ಲ ಏಕೆ ?
ಬೇರೆ ಯಾರಾದರೂ ಮುಂದಾಳತ್ವ ವಹಿಸಿದರೆ ಅವರನ್ನು ಪ್ರೋತ್ಸಾಹಿಸದೇ ತೆಗಳುತ್ತೀವಿ ಏಕೆ ?
*ನಾವೇಕೆ ಹೀಗೆ ಗೊತ್ತೆ?*
ನಮ್ಮಲ್ಲಿ ನಮಗೇ ವಿಶ್ವಾಸ ಇಲ್ಲ. ಒಬ್ಬ ಆತ್ಮವಿಶ್ವಾಸ ಇರುವ ಮನುಷ್ಯ ಮಾತ್ರ ನಾಯಕನಾಗಲು ಸಾಧ್ಯ ಎಂಬ ಮಾತು ನಿಜ. ಈ ಮಾತು ಎಲ್ಲರನ್ನು ಪ್ರೋತ್ಸಾಹಿಸಲು ಹೇಳಿದೆಯಾದರೂ, ಎಲ್ಲರೂ "ನಮಗೆಲ್ಲಿದೆ ಆ ವಿಶ್ವಾಸ " ಎಂದು ಶ್ರೀ ಸಾಮನ್ಯರಾಗೇ ಉಳಿಯುತ್ತಾರೆ.ಈ ನಕಾರಾತ್ಮಕ ಮನೋಭಾವ ಯಾತಕ್ಕೆ ?
ಅಲ್ಲ... ಶ್ವಾಸವಿದ್ದ ಮೇಲೆ ವಿಶ್ವಾಸ ಇದ್ದೆ ಇರುತ್ತದೆ ಅಲ್ಲವೆ?
ಕೆಂಡವು ಪ್ರಜ್ವಲಿಸುವುದು ಅದರ ಮೇಲಿನ ಬೂದಿಯನ್ನು ಕೊಡವಿದಾಗ ಮಾತ್ರ. ಅಂತೆಯೇ ನಾವು ನಮ್ಮನ್ನು ಕವಿದಿರುವ ನಕಾರಾತ್ಮಕ ಮನೋಭಾವನೆಯನ್ನು ಕೊಡವಬೇಕು. ನಮಗೆ ನಾವು ನಾಯಕರಾಗಬೇಕು. ಆಗಲೇ ನಾವು ಎಲ್ಲದರಲ್ಲೂ ಮುನ್ನುಗ್ಗುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಲು ಸಾಧ್ಯ. ನಾವು ಬೇರೆಯವರನ್ನು ತೆಗಳಲು ಇರುವ ಕಾರಣ ಒಂದೆ. ನಾವು ತೋರಿಸದ ಧೈರ್ಯ. ಅವರಿಗೆ ಧೈರ್ಯವಿತ್ತು..ಅವರು ನಾಯಕರಾದರು ಎನ್ನುವುದು ಶುದ್ಧ ಸುಳ್ಳು. ನಮಗೂ ಧೈರ್ಯವಿದೆ. ಆದರೆ ನಾವು ಅದನ್ನು ತಿಜೋರಿಯಲ್ಲಿ ಹಾಕಿ ಬೀಗ ಹಾಕಿಟ್ಟಿದ್ದೇವೆ. ಅದನ್ನು ತೆಗೆಯಲೂ ಸಹ ಬೇರೊಬ್ಬ ನಾಯಕನಿಗಾಗಿ ಕಾಯುತ್ತೇವೆ !!! ಅಕಸ್ಮಾತ್ ಆ ನಾಯಕ ಸತ್ತರೆ ? ನಾವು ಹಾಗೆಯೇ ಇರುತ್ತೆವೆ. ಧೈಯವಿಲ್ಲದೆ, ಛಲವಿಲ್ಲದೆ...
ನಮ್ಮಲ್ಲಿರುವ ನಾಯಕನನ್ನು ನಾವೆಂದಿಗೂ ಅಳಿಸಬಾರದು. ನಾವು ಉಳಿದರೇನೇ ನಮಗೆ ಈ ಲೋಕ. ನಮಗೆ ಮೊದಲು ನಾವೇ ನಾಯಕರಾಗಬೇಕು. ಆಗಲೇ ನಾವು ಬೇರೊಬ್ಬ ನಾಯಕನೊಂದಿಗೆ ಕೈ ಜೋಡಿಸಲು ಸಾಧ್ಯ. ಅವರನ್ನು ತೆಗಳದೇ ಪ್ರೋತ್ಸಾಹಿಸಲು ಸಾಧ್ಯ. ಒಂದು ಆದರ್ಶಯುತ ಜಗತ್ತನ್ನು ಕಟ್ಟಲು ಸಾಧ್ಯ.
ಧನ್ಯೋಸ್ಮಿ🙏