ಮಹಿಳಾ ದಿನಾಚರಣೆ


ಮಹಿಳಾ ದಿನಾಚರಣೆಯನ್ನ ಪ್ರತಿ ವರ್ಷ ಮಾರ್ಚ 8ರಂದು ಆಚರಿಸಲಾಗುತ್ತಿದೆ. ಇದು ಇನ್ನು ಎಷ್ಟೋ ಮಹಿಳೆಯರಿಗೆ ಗೊತ್ತಿಲ್ಲ ಮತ್ತು ತಿಳಿಯುವ ಪ್ರಯತ್ನವನ್ನು ಮಾಡಿರುವುದಿಲ್ಲ. ಯಾಕೆಂದರೆ ಎಷ್ಟೋ ಮಹಿಳೆಯರು ತಮ್ಮ ಚೌಕಟ್ಟನ್ನು ಬಿಟ್ಟು ಹೊರಬಂದಿಲ್ಲ. ಚೌಕಟ್ಟನ್ನು ಬಿಟ್ಟು ಹೊರಬಂದಾಗ ನಿಶ್ಚಿತವಾಗಿ ಸಾಧಿಸಬಲ್ಲಳು. ಸಮಾಜದಲ್ಲಿ, ಮನೆ ಮನೆಗಳಲ್ಲಿ ಆಗುತ್ತಿರುವಂಥ ಲಿಂಗತಾರತಮ್ಯ, ಅಸಮಾನತೆ, ಅಸಹಕಾರ, ಅನ್ಯಾಯ, ಅತ್ಯಾಚಾರ, ದೌರ್ಜನ್ಯವನ್ನು ಮೆಟ್ಟಿ ನಿಲ್ಲಬೇಕಾಗಿದೆ. ಇದು ಮೊದಲು ನಮ್ಮ ನಮ್ಮ ಮನೆಗಳಲ್ಲಿ ನಮ್ಮಿಂದ ಆರಂಭವಾಗಬೇಕು. ಮಹಿಳಾ ದಿನಾಚರಣೆ ಕೇವಲ ಕೈಗೆ ಕೈ ಮಿಲಾಯಿಸಿ ಸಂಭ್ರಮಪಡುವುದಲ್ಲ, ಅನ್ಯಾಯದ ವಿರುದ್ದ ಹೋರಾಟಕ್ಕೆ ಅಣಿಯಾಗಲು, ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆಗೈಯಲು ಪ್ರತಿಯೊಬ್ಬ ಮಹಿಳೆ ಮತ್ತೊಬ್ಬ ಮಹಿಳೆಯನ್ನು ಹುರುದುಂಬಿಸಬೇಕಾಗಿದೆ.


ನ್ಯೂಯಾರ್ಕ ನ ಕ್ಲಾರಾ ಜೆಟಕಿನ್ ಎಂಬ ಮಹಿಳೆ, ಮಹಿಳೆಯರ ಸೌಲಭ್ಯಕ್ಕಾಗಿ, ಸಮಾನವೇತನಕ್ಕಾಗಿ ಮಹಿಳಾ ಕಾರ್ಮಿಕರನ್ನು ಸೇರಿಸಿಕೊಂಡು ತಿಂಗಳಾನುಗಟ್ಟಲೇ ಹೋರಾಟ ನಡೆಸಿ ಯಶಸ್ಸು ಸಾಧಿಸಿದ ದಿನ. ಈ ದಿನವನ್ನು ನೆನಪನ್ನಾಗಿರಿಸಲು ವಿಶ್ವಸಂಸ್ಥೆಯು 1975ರಲ್ಲಿ ಮಹಿಳಾ ದಿನಾಚರಣೆಯನ್ನಾಗಿ ಆಚರಿಸಲು ಕರೆಕೊಟ್ಟಿತು. ಅಂತರಾಷ್ಟ್ರೀಯವಾಗಿ ಇಂದು ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ಮಹಿಳಾ ಕೂಲಿ ಕಾರ್ಮಿಕರು ಮಾಡಿದ ಚಳುವಳಿಯಿಂದ ಪ್ರಾರಂಭವಾಯಿತು. ಮಹಿಳೆಯರು ಮತ ಚಲಾಯಿಸುವ ಹಕ್ಕು, ಸಾರ್ವಜನಿಕ ಕಛೇರಿಗಳಲ್ಲಿ ಕೆಲಸ ಮಾಡುವ ಹಕ್ಕು, ಸಮಾನತೆಯ ಹಕ್ಕು, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಭಾಗವಹಿಸುವ ಹಕ್ಕು ಇವುಗಳನ್ನು ಸಮಾನವಾಗಿ ಪಡೆಯಲು ಚಳುವಳಿ ನಡೆಸಿ, ತಮ್ಮದೇ ಆದ ಸ್ಥಾನವನ್ನು ಗಳಿಸಿದರು. ಕ್ರಮೇಣವಾಗಿ ಅನೇಕ ಮಹಿಳಾ ಚಳುವಳಿಗಳು ನಡೆದು, ನಂತರ ಇದು ಮಹಿಳಾ ದಿನಾಚರಣೆಯಾಗಿ ಮಾರ್ಪಾಡಾಯಿತು. ಇದರಿಂದ ಪ್ರತಿಯೊಬ್ಬ ಮಹಿಳೆಗೆ ತನ್ನದೇ ಆದಂಥ ಸ್ವಾತಂತ್ರ್ಯವನ್ನು ಹೊಂದಲು, ಸಾಧಿಸಲು ಸ್ಥಾನಗಳಿಸಲು, ಒಬ್ಬರಿಂದ ಇನ್ನೊಬ್ಬರನ್ನು ನೋಡಿ ಯಶಸ್ಸು ಗಳಿಸಲು ಪ್ರೋತ್ಸಾಹ ನೀಡುತ್ತದೆ.


ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ವ್ಯಾಪಕಗೊಳ್ಳುತ್ತಾ ನಡೆದಿದ್ದರೂ ಸಹ ಅದರ ಐತಿಹಾಸಿಕ ಹಿನ್ನೆಲೆಯನ್ನು ಮಸುಕು ಮಾಡುವ ಪ್ರವೃತ್ತಿಗಳು ಬೆಳೆಯುತ್ತಿವೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದರೆ ಬಂಡವಾಳಶಾಹಿ ಶೋಷಣೆಯ ವಿರುದ್ಧ ಮಹಿಳಾ ವಿಮೋಚನೆಗಾಗಿ ನಡೆದ ಸಮಾಜವಾದಿ ಹೋರಾಟದ ಪರಂಪರೆ ಎನ್ನುವುದಾಗಿದೆ.


ದೆಹಲಿ ಅತ್ಯಾಚಾರ ಘಟನೆ ಸಾಂಕೇತಿಕ ಮಾತ್ರ. ಈಗಾಗಲೇ ಸಾಕಷ್ಟು ಅತ್ಯಾಚಾರ ಪ್ರಕರಣಗಳು ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಉಳಿದಿವೆ. ತ್ವರಿತ ನ್ಯಾಯಾಲಯಕ್ಕೆ ರವಾನಿಸಿ, ಅಪರಾಧಿಗಳಿಗೆ ಬೇಗನೇ ಶಿಕ್ಷೆ ಕೊಡುವಂತಾಗಬೇಕು. ಅದಕ್ಕಾಗಿಯೇ ಒಂದು ಕಾನೂನನ್ನು ಜಾರಿಗೊಳಿಸಬೇಕು. ಶಿಕ್ಷಣ, ಆರ್ಥಿಕ ಸಬಲೀಕರಣ ಸಾಧಿಸಿ ಸ್ವಾವಲಂಬಿ ಬದುಕು ನಡೆಸುತ್ತಿರುವ ಮಹಿಳೆ ಇನ್ನೂ ಮೀಸಲಾತಿಯಡಿಯಲ್ಲಿ ದುಡಿಯಬೇಕಾದ ಅನಿವಾರ್ಯತೆ. ಮಹಿಳೆಯರಿಗೆ ಹಕ್ಕು, ಹಿತರಕ್ಷಣೆ, ಜಾಗತಿಕ ಮಟ್ಟದಲ್ಲಿ ತಿಳಿವಳಿಕೆ, ಶಿಕ್ಷಣ, ತರಬೇತಿ, ವಿಜ್ಞಾನ, ತಂತ್ರಜ್ಞಾನಕ್ಕೆ ನೆರವು ನೀಡಿ, ಸಮಾಜದಲ್ಲಿ ಸಮಾನತೆಯ ವೈಶಿಷ್ಟ್ಯಪೂರ್ಣ ಬದಲಾವಣೆಗಳಿಗೆ ಅವಕಾಶ ಕಲ್ಪಿಸಬೇಕು. ಉದ್ಯೋಗ ಕ್ಷೇತ್ರದಲ್ಲಿ ಹೆಣ್ಣು ಗಂಡಿಗೆ ಸರಿಸಮಾನ ಎಂದು ತೋರಿಸಿಕೊಂಡಿದ್ದರೂ, ಹಲವೆಡೆಗಳಲ್ಲಿ ಇನ್ನೂ ನಡೆಯುತ್ತಿರುವ ಲಿಂಗ ತಾರತಮ್ಯ, ಹೆಣ್ಣು ಭ್ರೂಣಹತ್ಯೆ, ಅತ್ಯಾಚಾರ ಇವುಗಳನ್ನು ತಡೆಯಬೇಕು. ವಿಶ್ವಾಸ, ಪ್ರೀತಿ, ಮಮತೆ, ನಂಬಿಕೆ, ನೈತಿಕ ಮೌಲ್ಯಗಳು ನಮ್ಮ ಸಮಾಜದ ಕಣ್ಣುಗಳಾಗಬೇಕು. ಮಹಿಳೆಯರ ಸಾಧನೆಗೆ ಪ್ರೋತ್ಸಾಹ ನೀಡಬೇಕು. ಇದಕ್ಕೆ ಪುರುಷರ ನೈತಿಕ ಬೆಂಬಲ ದೊರಕಬೇಕು.


ಪುರಾತನ ಕಾಲದಿಂದಲೂ ಮಹಿಳೆ ಎಷ್ಟೇ ಕೆಲಸ ಮಾಡಿದರೂ “ ನ ಸ್ತ್ರೀ ಸ್ವಾತಂತ್ರ್ಯ ಅರ್ಹತಿ” ಎಂಬ ನಾಣ್ಣುಡಿಗೆ ತುತ್ತಾಗಿದ್ದಾಳೆ. ಅಂದಿನಿಂದಲೂ ಅವಳ ಮೇಲೆ ಅತ್ಯಾಚಾರ, ದಬ್ಬಾಳಿಕೆ, ಶೋಷಣೆ, ಅನ್ಯಾಯ ನಡೆಯುತ್ತಲೇ ಇದೆ. ಪುರುಷ ಪ್ರಧಾನವಾದ ನಮ್ಮ ಸಮಾಜದಲ್ಲಿ ಹೆಣ್ಣು ಕೇವಲ ಮನೆಗೆಲಸಕ್ಕೆ ಸೀಮಿತ, ಕಡಿಮೆ ಶಿಕ್ಷಣ, ಮದುವೆ, ಮಕ್ಕಳು, ಕುಟುಂಬ, ಹೊರಗಿನ ಜ್ಞಾನವೇ ಇರಲಿಲ್ಲ. ಹೆಣ್ಣನ್ನು ಕೀಳಾಗಿ ಕಾಣುವುದು, ಅವಳು ಮನೆಯವರಿಗೆ ಭಾರ, ಗಂಡು ಹೆಣ್ಣಿನ ಬೇಧ ಭಾವ ಮನೆಯ, ಸಮಾಜದ ಸದಸ್ಯರಿಂದ ಎದ್ದು ತೋರುತ್ತಿತ್ತು. ಪ್ರತಿಯೊಂದರಲ್ಲೂ ಕೀಳಿರಿಮೆಯಿಂದ ತುಚ್ಛವಾಗಿ ಕಾಣಲಾಗುತ್ತಿತ್ತು. ಹೆಣ್ಣು ಮಗು ಹುಟ್ಟಿತೆಂದರೆ ಆ ತಾಯಿಯು ನರಕಯಾತನೆಯನ್ನು ಅನುಭವಿಸಬೇಕಿತ್ತು. ಇನ್ನೂ ಕೆಲವರು ಭ್ರೂಣ ಹತ್ಯೆಯನ್ನೇ ಮಾಡುತ್ತಿದ್ದರು. ಆದರೂ ಹೆಣ್ಣು ಭ್ರೂಣ ಹತ್ಯೆ ಇನ್ನೂ ನಿಂತಿಲ್ಲ.

ಮಹಿಳೆಯನ್ನು ಭೂಮಿಗೆ ಹೋಲಿಸುತ್ತಾರೆ. ಹೆಣ್ಣಿಲ್ಲದೇ ನಾಡಿಲ್ಲ. ಹೆಣ್ಣಿನಿಂದಲೇ ವಂಶಾಭಿವೃದ್ಧಿ. ಇಂದು ಹೆಣ್ಣು ಅಡುಗೆ ಮನೆಯ ಕೆಲಸದಿಂದ ಆಕಾಶದೆತ್ತರದ ಕೆಲಸದವರೆಗೂ ತನ್ನ ಸಾಧನೆಯನ್ನು ತೋರಿಸಿದ್ದಾಳೆ. ದೈಹಿಕ ಬದಲಾವಣೆಗಳನ್ನು ಹೊರತುಪಡಿಸಿ ಪ್ರತಿಯೊಂದರಲ್ಲೂ ಪುರುಷನಿಗೆ ಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಅಶಿಕ್ಷಣವನ್ನು ಮೆಟ್ಟಿನಿಂತು, ಶಿಕ್ಷಣದತ್ತ ಹೆಜ್ಜೆಯಿಟ್ಟು ಸಮಾಜದಲ್ಲಿ ತನ್ನತನದ ಗೌರವವನ್ನು ಹೆಚ್ಚಿಸಿಕೊಂಡಿದ್ದಾಳೆ. ಎಷ್ಟೇ ಬೆಳೆಯುತ್ತಿದ್ದರೂ ಅವಳನ್ನು ಇನ್ನೂ ಕೀಳು ದೃಷ್ಟಿಯಿಂದ ಕಾಣುವುದು ತಪ್ಪಿಲ್ಲ. ಆಕೆಯ ಮೇಲೆ ಅತ್ಯಾಚಾರ, ದೌರ್ಜನ್ಯ, ಅಸಮಾನತೆಗಳು ನಡೆಯುತ್ತಲೇ ಇದೆ. ಎಷ್ಟೋ ಕಾನೂನುಗಳು ಮಹಿಳೆಯರ ಪರವಾಗಿದ್ದರೂ, ಅವುಗಳ ಉಪಯೋಗ ಪಡೆಯಲು ಮುಂದೆ ಬರುತ್ತಿಲ್ಲ. ಕಾರಣ ಅವಳಿಗೆ ಅಲ್ಲಿಯೂ ಮೊಸವಾಗಬಹುದೆಂಬ ಭಯದಿಂದ, ತನಗಾದಂಥ ಅನ್ಯಾಯವನ್ನು ವ್ಯಕ್ತಪಡಿಸಲು ಹಿಂಜರಿಯುತ್ತಾಳೆ. ಮಹಿಳೆಯರಿಗೆ ಮೀಸಲಿರುವಂಥ ಕಾನೂನುಗಳನ್ನು ಉಪಯೋಗಿಸಿಕೊಂಡು ಅನ್ಯಾಯ, ದೌರ್ಜನ್ಯ, ಅತ್ಯಾಚಾರ, ಹಿಂಸಾತ್ಮಕ ಕೃತ್ಯಗಳ ವಿರುದ್ಧ ಮಹಿಳೆಯರು ಪುರುಷರು ಹೋರಾಡಿದಾಗ ಮಾತ್ರ, ವ್ಯಕ್ತಿ ಸ್ವಾತಂತ್ರ್ಯದೊಂದಿಗೆ, ಗೌರವ ಘನತೆಯೊಂದಿಗೆ, ಬದುಕಬಹುದಾಗಿದೆ.


*ಭಾರತದಲ್ಲಿ ಮಹಿಳಾ ದಿನಾಚರಣೆ*

ಭಾರತದಲ್ಲಿ ಮಹಿಳಾ ದಿನಾಚರಣೆಗೆ ಸಾಮಾಜಿಕ ಅಥವಾ ರಾಜಕೀಯ ಹಿನ್ನೆಲೆ ಏನೂ ಇಲ್ಲವಾದರೂ, ಭಾರತದಲ್ಲೂ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಸಾಧಾರಣವಾಗಿ ಗಂಡಸರು ಮಹಿಳೆಯರಿಗೆ ತಮ್ಮ ಗೌರವವನ್ನು ವ್ಯಕ್ತಪಡಿಸುತ್ತಾರೆ. ಆದರೆ ಭಾರತಕ್ಕೆ ಮಹಿಳಾ ಸಮಾನತೆ ಎಂಬುದು ಹೊಸ ಕಲ್ಪನೆಯೇನಲ್ಲ. ಅರ್ಧನಾರೀಶ್ವರ ಎಂಬ ಅದ್ಭುತ ಕಲ್ಪನೆ ಹುಟ್ಟಿದ್ದು ಭಾರತದಲ್ಲಿ. ಪ್ರಕೃತಿ ಅಥವಾ ಹೆಣ್ಣು ಹಾಗೂ ಪುರುಷ ಅಥವಾ ಗಂಡು ಒಬ್ಬರಿಂದೊಬ್ಬರು ಬೇರೆ ಅಲ್ಲ, ಸೃಷ್ಟಿಯಲ್ಲಿ ಇವರಿಬ್ಬರದು ಸಮಪಾಲು ಎಂಬುದೇ ಅರ್ಧನಾರೀಶ್ವರ ಎಂಬ ಕಲ್ಪನೆಯ ಸಂಕ್ಷಿಪ್ತ ಅರ್ಥ.