ತುಡಿಯುವುದೇ ಜೀವನ


ఎರಡು ಮನೆಗಳಿದ್ದವು ಎದುರುಬದರಲ್ಲಿ.. ಒಂದರಲ್ಲಿ ಒಂದು ಮಧ್ಯಮ ವರ್ಗದ ಕುಟುಂಬ ವಾಸವಾಗಿತ್ತು, ಗಂಡ ಹೆಂಡತಿ ಮತ್ತು ಎಂಟು ವರ್ಷದ ಮಗ. ಇನ್ನೊಂದು ಬಂಗಲೆ.. ಅಲ್ಲಿಯೂ ಕೂಡ ಗಂಡ ಹೆಂಡತಿ ಮತ್ತು ಎಂಟು ವರ್ಷದ ಮಗನಿದ್ದರು.


ಪ್ರತಿದಿನ ಸ್ಕೂಲಿಗೆ ಹೋಗುವಾಗ ಒಬ್ಬ ಸ್ಕೂಟರಿನಲ್ಲಿ ಹೋದರೆ ಇನ್ನೊಬ್ಬ ತಮ್ಮ ಅಂತಸ್ತಿಗೆ ತಕ್ಕಂತೆ ದೊಡ್ಡ ಕಾರಿನಲ್ಲಿ ಹೋಗುತ್ತಿದ್ದ. ನೋಡುಗರೆಲ್ಲ ಆ ಶ್ರೀಮಂತ ಹುಡಗನ ಅದೃಷ್ಟವನ್ನು ಹಾಡಿ ಹೊಗಳುತ್ತಿದ್ದರು.


ಸಂಜೆಯ ವೇಳೆ ಆ ಶ್ರೀಮಂತ ಹುಡುಗ ಬಾಲ್ಕನಿಯಲ್ಲಿ ನಿಂತು ರಸ್ತೆಯಲ್ಲಿ ಆಟವಾಡುವ ಹುಡುಗರನ್ನು ನೋಡುತ್ತಾ ನಿಲ್ಲುತ್ತಿದ್ದ.


ಅವನು ಬೇರೆ ಹುಡುಗರಂತೆ ರಸ್ತೆಯಲ್ಲಿ ಆಟವಾಡುವಂತಿಲ್ಲ... ಅಂತಸ್ತಿನ ಪ್ರಶ್ನೆ!ಅಪ್ಪ ಅಮ್ಮನಿಂದ ನಿರ್ಬಂಧ. ಪ್ರತಿದಿನ ಅವನು ತನ್ನ ಅದೃಷ್ಟವನ್ನು ನೆನೆದು ದುಃಖಿಸುತ್ತಿದ್ದ . ಮಕ್ಕಳಿಗೆ ಆಟವೇ ಆಸ್ತಿ . ಆದರೆ ಅವನು ತನಗಿಂತ ೪೦-೫೦ ವರ್ಷ ದೊಡ್ಡವರೊಂದಿಗೆ ಆಟವಾಡಿ ತೃಪ್ತಿ ಪಟ್ಟುಕೊಳ್ಳಬೇಕಾಗಿತ್ತು. ಅವನ ಕಣ್ಣೀರನ್ನು ಯಾರೂ ಗಮನಿಸಲಿಲ್ಲ. ಆಟಿಗೆಗಳಲ್ಲಿ ಅವನು ಆಸಕ್ತಿಯನ್ನೇ ಕಳೆದುಕೊಂಡುಬಿಟ್ಟಿದ್ದ.


ಈ ಮನೆಯಲ್ಲಿ ಹುಟ್ಟುವುದಕ್ಕಿಂತ ಎದುರು ಮನೆಯಲ್ಲಾದರೂ ಹುಟ್ಟಿದ್ದರೆ ಎಂದು ದಿನಂಪ್ರತಿ ತನ್ನ ಅದೃಷ್ಟವನ್ನು ಹಳಿಯುತ್ತಿದ್ದ.


ಅದೇ ಸಮಯದಲ್ಲಿ ಆ ಮಧ್ಯಮ ವರ್ಗದ ಹುಡುಗ ಸಂಜೆಯಾಯಿತೆಂದರೆ ಸಾಕು ನೆರೆ ಹೊರೆಯ ಮಕ್ಕಳ ಜೊತೆ ಸೇರಿಕೊಂಡು ಚೆನ್ನಾಗಿ ಆಟವಾಡುತ್ತಿದ್ದ. ಕತ್ತಲಾದರೂ ಅವರ ಆಟಗಳೇ ಮುಗಿಯುತ್ತಿರಲಿಲ್ಲ. ತಂದೆ ತಾಯಿಯರು ಹುಡುಕಿಕೊಂಡು ಬರಬೇಕಿತ್ತು- ಇವರನ್ನು ಕರೆದೊಯ್ಯಲು . ಅವನ ಹತ್ತಿರ ಇರುವುದೇ ಮೂರ್ನಾಲ್ಕು ಆಟಿಗೆಗಳು.


ಅದೊಂದು ದಿನ ಅವನು ತನ್ನ ಬ್ಯಾಟಿಂಗ್ ಸರದಿಗಾಗಿ ಕಾಯುತ್ತ ಕುಳಿತಿದ್ದ ಮತ್ತು ಅಕಸ್ಮಾತ್ತಾಗಿ ಅವನ ದೃಷ್ಟಿ ಆ ಬಂಗಲೆಯ ಮೇಲೆ ಬಿತ್ತು . ಅಲ್ಲಿರುವ ತನ್ನ ಸಹಪಾಠಿಯ ಬಗ್ಗೆ ಅವನು ಯೋಚಿಸತೊಡಗಿದ. ಅವನದೇ ಅದೃಷ್ಟ - ಆಡಲು ಬೇಕಾದಷ್ಟು ಆಟಿಗೆಗಳನ್ನು ಕೊಳ್ಳಬಹುದು ಎಷ್ಟು ಬೇಕಾದರೂ ದುಡ್ಡು ಖರ್ಚು ಮಾಡಬಹುದು ಒಳ್ಳೊಳ್ಳೆಯ ಬಟ್ಟೆಗಳನ್ನು ತೆಗೆದುಕೊಳ್ಳಬಹದು ... ಹೀಗೆ. ಕೊನೆಗೆ ಅವನು ಅಂದುಕೊಂಡಿದ್ದೇನು ಗೊತ್ತಾ ? – “ಈ ಮನೆಯಲ್ಲಿ ಹುಟ್ಟುವುದಕ್ಕಿಂತ ಎದುರು ಮನೆಯಲ್ಲಾದರೂ ಹುಟ್ಟಿದ್ದರೆ”..


ಇಬ್ಬರೂ ಅದೃಷ್ಟವಂತರು ಮತ್ತು ಅದೃಷ್ಟಹೀನರು?!